ನಾಗ್ಪುರ್ : ಮದುವೆಯಾಗಿ ಆ ದಂಪತಿಗಳು 25ನೇ ವರ್ಷ ಮುಗಿಸಿ 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಈ ವೇಳೆ, ವೆಡ್ಡಿಂಗ್ ಆನಿವರ್ಸರಿ ಗೆ ಎಂದು ಖರೀದಿಸಿದ ಹೊಸ ಬಟ್ಟೆಯನ್ನು ಧರಿಸಿಕೊಂಡು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆದರೆ ನಂತರ ನಡೆದಿದ್ದು ಘೋರ ದುರಂತ. ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಬಳಿಕ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹೌದು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಸಾವಿಗೆ ಶರಣಾಗಿದ್ದಾರೆ.ಮೃತರನ್ನು 57 ವರ್ಷದ ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾನ್‌ಕ್ರೀಫ್ ಅಡುಗೆಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತ್ನಿ 46 ವರ್ಷದ ಆನಿ ಜೆರಿಲ್, ಡ್ರಾಯಿಂಗ್ ರೂಮಿನಲ್ಲಿ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾದರು. ದಂಪತಿ 26 ವರ್ಷಗಳ ಹಿಂದೆ ಮದುವೆಯ ದಿನ ಧರಿಸಿದ್ದ ಅದೇ ಉಡುಗೆಗಳನ್ನು ಧರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೆರಿಲ್ ಮತ್ತು ಆಯನ್ ದಂಪತಿಗೆ ಮಕ್ಕಳು ಇರಲಿಲ್ಲ. ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂಬುದನ್ನು ದಂಪತಿ ಸ್ಪಷ್ಟಪಡಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಡೆತ್‌ನೋಟ್‌ನಲ್ಲಿ ತಿಳಿಸಿಲ್ಲ. ಇದೆಲ್ಲದರ ಜೊತೆ ತಮ್ಮ ಆಸ್ತಿಯ ಕುರಿತ ಉಯಿಲನ್ನು ಜೆರಿಲ್ ಮತ್ತು ಆಯನ್ ದಂಪತಿ ಹಂಚಿಕೊಂಡಿದ್ದಾರೆ. ಮಧ್ಯರಾತ್ರಿಯವರೆಗೂ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದ ದಂಪತಿ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರೋದನ್ನು ಕಂಡು ಸಂಬಂಧಿಕರು ಮತ್ತು ನೆರೆಹೊರೆಯವರು ಆಘಾತಕ್ಕೆ ಒಳಗಾಗಿದ್ದಾರೆ.
ದಂಪತಿಯ ಆಸೆಯಂತೆಯೇ ಒಂದೇ ಶವಪೆಟ್ಟಿಗೆಯಲ್ಲಿ ಇಬ್ಬರನ್ನು ಮದುವೆ ಧಿರಿಸಿನಲ್ಲಿ ಅಂತ್ಯಸಂಸ್ಕಾರ ನೆರೆವೇರಿಸಲಾಗಿದೆ. ಕಳೆದ ಮೂರು ತಲೆಮಾರುಗಳಿಂದ ಅಂತ್ಯಕ್ರಿಯೆ ನಡೆಸುವ ವಿಜಯ್ ಅಲಿಕ್ ಮೈಕೆಲ್ ಎಂಬವರು ಮಾತನಾಡಿ, ಇದೇ ಮೊದಲ ಬಾರಿಗೆ ಇಬ್ಬರಿಗಾಗಿ ಒಂದೇ ಶವಪೆಟ್ಟಿಗೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ದಂಪತಿ ಕೈ ಹಿಡಿದುಕೊಂಡೇ ತಮ್ಮ ಅಂತ್ಯಸಂಸ್ಕಾರ ಆಗಬೇಕೆಂದು ಹೇಳಿಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ನೆರವೇರಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದರು.