ಬೆಂಗಳೂರು : ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ(ಆರ್‌ಟಿಓ) ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಯಶವಂತಪುರ, ರಾಜಾಜಿನಗರ, ಕೆ.ಆರ್.ಪುರ, ಜಯನಗರ, ಯಲಹಂಕ, ಕಸ್ತೂರಿನಗರ ಆರ್‌ಟಿಓ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಖುದ್ದು ಯಶವಂತಪುರ ಮತ್ತು ರಾಜಾಜಿನಗರ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವು ಲೋಪ ದೋಷಗಳು ಕಂಡು ಬಂದಿವೆ.
ಆರ್‌ಟಿಒ ಕಚೇರಿ ಆವರಣದಲ್ಲಿ 32 ಸ್ಟೇಷನರಿ ಹಾಗೂ ಜೆರಾಕ್ಸ್ ಅಂಗಡಿ ಗಳಿದ್ದು, ಲೋಕಾಯುಕ್ತ ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಅಂಗಡಿಗಳನ್ನು ಮುಚ್ಚಲಾಗಿದೆ. ಈ ಸಂಬಂಧ ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದ್ದಾರೆ.
ಇದೇ ವೇಳೆ ಕೆಲ ನೌಕರರು ಕರ್ತವ್ಯಕ್ಕೆ ಗೈರಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ. ಕೆಲ ಅಧಿಕಾರಿಗಳು ಕಚೇರಿಯ ನಗದು ವಹಿವಾಟಲ್ಲಿ ಸಹಿ ಮಾಡದಿರುವುದು ಕಂಡು ಬಂದಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ 32 ನೌಕರರ ಪೈಕಿ 7 ಮಂದಿ ಮಾತ್ರ ಹಾಜರಾತಿ ಪುಸ್ತಕ ದಲ್ಲಿ ಸಹಿ ಮಾಡಿರುವುದು ಕಂಡು ಬಂದಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಓಡುತ್ತಿದ್ದ ಇಬ್ಬರು ಏಜೆಂಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ದಾಗ 14 ಸಾವಿರ ರು. ನಗದು ಪತ್ತೆಯಾಗಿದೆ. ವಿಚಾರಣೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ.








