ಬೆಂಗಳೂರು : ಪಾಸ್ ಪೋರ್ಟ್ ನೆಪದಲ್ಲಿ ಯುವತಿ ಒಬ್ಬಳಿಗೆ ಕಾನ್ಸ್ಟೇಬಲ್ ಒಬ್ಬ ಮನೆಗೆ ಬಂದು ಒಂದೇ ಒಂದು ಬಾರಿ ತಬ್ಬಿಕೋ, ಯಾರಿಗೂ ಹೇಳಲ್ಲ ಎಂದು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಯುವತಿಯ ದೂರಿನ ಮೇರೆಗೆ ಇದೀಗ ಕಾನ್ಸ್ಟೇಬಲ್ ಕಿರಣನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಬಾಪೂಜಿ ನಗರದ ಯುವತಿ ಒಬ್ಬಳು ಪಾಸ್ ಪೋರ್ಟ್ ಗಾಗಿ ಇತ್ತೀಚಿಗೆ ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ ಕಿರಣ್ ಡಾಕುಮೆಂಟ್ಸ್ ವೆರಿಫಿಕೇಶನ್ ನೆಪದಲ್ಲಿ ಎರಡು ಮೂರು ಬಾರಿ ಯುವತಿಯ ಮನೆಗೆ ತೆರಳಿದ್ದಾನೆ. ಈ ವೇಳೆ ಯುವತಿಯೊಂದಿಗೆ ಕಿರಣ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿಯು ದೂರಿನಲ್ಲಿ ಆರೋಪಿಸಿದ್ದಾಳೆ.
ನಿನ್ನೆ ಕೂಡ ಕಿರಣ್ ಯುವತಿಯ ಮನೆಗೆ ಬಂದಿದ್ದಾನೆ. ಈ ವೇಳೆ ನಿನ್ನ ಅಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ನನಗೆ ಸಹಕರಿಸದಿದ್ದರೆ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಒಂದೇ ಒಂದು ಬಾರಿ ತಬ್ಬಿಕೋ ಯಾರಿಗೂ ಹೇಳಲ್ಲ ಎಂದು ಹೇಳಿದ್ದಾನೆ.ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಬಳಿಕ ನನ್ನನ್ನು ಒಂದು ಬಾರಿ ತಬ್ಬಿಕೋ ಎಂದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇವತಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಡಿಸಿಪಿ ಗಿರೀಶ್ ಕುಮಾರ್ ಕಿರಣ್ ನನ್ನು ಅಮಾನತುಗೊಳಿಸಿದ್ದಾರೆ.