ಬೆಂಗಳೂರು : ರಾಜ್ಯದಲ್ಲಿ ಮುಡಾ ಹಗರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇತ್ತ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇನ್ನೊಂದೆಡೆ ಕೆಐಎಡಿಬಿ ಯಲ್ಲಿ ಖರ್ಗೆ ಕುಟುಂಬ ಅಕ್ರಮ ಜಮೀನು ಪಡೆದುಕೊಂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಇತ್ತೀಚಿಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೀಗ ಇದೇ ವಿಚಾರವಾಗಿ ಕಾಂಗ್ರೆಸ್ ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಹೌದು ಕೆಐಎಡಿಬಿಯಿಂದ ಅಕ್ರಮವಾಗಿ ಭೂಮಿ ಪಡೆದ ಆರೋಪ ಸಂಬಂಧ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸಲೀಂ ಅಹ್ಮದ್ ನೇತೃತ್ವದ ಕಾಂಗ್ರೆಸ್ ಸದಸ್ಯರ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಛಲವಾದಿ ನಾರಾಯಣಸ್ವಾಮಿ ಕೆಐಎಡಿಬಿಯಿಂದ ಬೇರೆಯವರ ಹೆಸರಲ್ಲಿ ಭೂಮಿ ಪಡೆದು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಸದಸ್ಯರು ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಇಬ್ಬಗೆ ನೀತಿ ಆರೋಪ ಕೇಳಿಬಂದಿದೆ. ಸರ್ಕಾರದ ಇಲಾಖೆಗೆ ಜಾಗ ನೀಡಲು ಮೀನಾಮೇಷ ಎಣಿಸಲಾಗುತ್ತಿದ್ದು, ಖಾಸಗಿ ಟ್ರಸ್ಟ್, ಕಂಪೆನಿಗಳಿಗೆ ಸಿಎ ನಿವೇಶನ ನೀಡಲು ಕೆಐಎಡಿಬಿ ಅತ್ಯುತ್ಸಾಹ ತೋರಿದೆ ಎನ್ನಲಾಗಿದೆ.ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದ ನಿಯೋಗದಲ್ಲಿ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ವಸಂತ ಕುಮಾರ್, ಪುಟ್ಟಣ್ಣ, ರವಿ, ಉಮಾಶ್ರೀ ಹಾಗೂ ಸುಧಾಮ್ ದಾಸ್, ದಿನೇಶ್ ಗೂಳಿಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.