ತುಮಕೂರು : ಕಳೆದ 2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಯತ್ನಿಸಿ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಿ ಇದೀಗ ತುಮಕೂರಿನ ಎಸ್ ಪಿ ಕಚೇರಿಗೆ ಭೇಟಿ ನೀಡಿ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ದೂರು ನೀಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ಹಾಗೂ ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ಅವರು ತುಮಕೂರು ಎಸ್ಪಿ ಅಶೋಕ್ ವೆಂಕಟ್ ಅವರಿಗೆ ದೂರು ನೀಡಿದ್ದಾರೆ. ತುಮಕೂರಿನ ಎಸ್ಪಿ ಕಚೇರಿಗೆ ಭೇಟಿ ನೀಡಿ ರಾಜೇಂದ್ರ ದೂರು ಸಲ್ಲಿಸಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟು ಎಸ್‌ಪಿಗೆ ರಾಜೇಂದ್ರ ಅವರು ದೂರು ನೀಡಿದ್ದಾರೆ
2024ರ ನವೆಂಬರ್ ನಲ್ಲಿ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿಯ ರಜತಾದ್ರಿ ಮನೆಯಲ್ಲಿ ಈ ಒಂದು ಪ್ರಕರಣ ನಡೆದಿತ್ತು. ಇನ್ನು ಇದೆ ವಿಚಾರವಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಗುರುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೇಂದ್ರ ದೂರು ನೀಡಿದ್ದಾರೆ.
ರಾಜೇಂದ್ರ ಅವರ ಆರೋಪವೇನು?
ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ವಿಫಲ ಯತ್ನ ನಡೆದಿದೆ. ಕಳೆದ ನವೆಂಬರ್ 16ನೇ ತಾರೀಖು ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ಅಂದರೆ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಕೊಲೆ ಯತ್ನದ ಸಂಗತಿ ನನಗೆ ಜನವರಿಯಲ್ಲಿ ಗೊತ್ತಾಯಿತು. ಆಗ ನನಗೆ ಬಾತ್ಮಿದಾರರ ಮೂಲಕ ಒಂದು ವಾಯ್ಸ್ ರೆಕಾರ್ಡ್ (ಧ್ವನಿ ಮುದ್ರಿಕೆ) ಸಿಕ್ಕಿತು. ಆ ಆಡಿಯೋದಲ್ಲಿ ತುಮಕೂರಿನ ಮೂವರ ಹೆಸರುಗಳು ಉಲ್ಲೇಖವಾಗಿವೆ ಎಂದು ಹೇಳಿದರು.
ಅಲ್ಲದೆ ಆ ವ್ಯಕ್ತಿಗಳ ಪೈಕಿ ಒಬ್ಬಾತನ ಖಾತೆಗೆ 5 ಲಕ್ಷ ರು. ಹಣ ವರ್ಗಾವಣೆಯಾಗಿದೆ. ನನ್ನ ಹತ್ಯೆಗೆ ನೀಡಿದ ಹಣ ಇದಾಗಿದೆ. ಈ ಕೊಲೆ ಯತ್ನದ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಮುಖ್ಯಮಂತ್ರಿಗಳು ಸೂಕ್ತ ದಾಖಲೆಗಳೊಂದಿಗೆ ಡಿಜಿಪಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಅಂತೆಯೇ ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಿದೆ. ಆದರೆ ತುಮಕೂರಿನಲ್ಲಿ ಕೃತ್ಯ ನಡೆದಿರುವುದರಿಂದ ಆ ಜಿಲ್ಲೆಯ ಎಸ್ಪಿಯವರಿಗೆ ದೂರು ಕೊಡುವಂತೆ ಡಿಜಿಪಿರವರು ಸೂಚಿಸಿ ಕಳುಹಿಸಿದ್ದಾರೆ. ಹಾಗಾಗಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಂದು ರಾಜೇಂದ್ರ ದೂರು ಸಲ್ಲಿಸಿದ್ದಾರೆ.