ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನಡೆದಂತಹ ಕರ್ಮಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಬುರ್ಗಿ ಕಮಿಷನರ್ ಡಾ.ಶರಣಪ್ಪ ಅವರು ಈ ಒಂದು ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಹೌದು ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಕರ್ಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿ ಕಲ್ಬುರ್ಗಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ?
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಈ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ರಾಜಾತಿಥ್ಯ ಪಡೆದುಕೊಳ್ಳುವ ವಿಚಾರವಾಗಿ ನಂತರ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾದರಿಯಲ್ಲೇ ಇದೀಗ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡೆ ಸ್ಮಾರ್ಟ್ ಫೋನ್ ಬಳಸಿ ವಿಡಿಯೋ ಕಾಲ್ ಮಾಡಿರುವ ಫೋಟೋ ಇದೀಗ ವೈರಲ್ ಆಗಿದತ್ತು.
ವಿಶಾಲ, ಸಾಗರ ಹಾಗೂ ಸೋನು ಎಂಬುವವರು ಜೈಲಿನ ಕೋಣೆಯೊಳಗೆ ಕುಳಿತು ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಾ, ಗಾಂಜಾ ಸೇದುತ್ತಿದ್ದಾರೆ ಎನ್ನಲಾದ ದೃಶ್ಯಗಳು ಬಹಿರಂಗವಾಗಿವೆ.ಈ ಮೂವರು ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ಇರುವ ಕೆಲ ಕೈದಿಗಳು ಐಷರಾಮಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಮೂವರು ಕೈದಿಗಳು ಸ್ಮಾರ್ಟ್‌ಫೋನ್ ಬಳಸಿ ತಮ್ಮ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಕಳೆದ ತಿಂಗಳು ಜೈಲಿನಲ್ಲಿ ಗಾಂಜಾ ಸಾಗಣೆ ಮಾಡಿದ ಆರೋಪದಡಿ ಜೈಲಿನ ಕಸಗುಡಿಸುವ ಮಹಿಳಾ ಸಿಬ್ಬಂದಿಯೊಬ್ಬರನ್ನು ಫರಹತಾಬಾದ್ ಠಾಣೆಯ ಪೊಲೀಸರು ಬಂಧಿಸಿದ್ದರು. ಈಗ ಕೈದಿಗಳು ಜೈಲಿನಲ್ಲಿಯೇ ಗಾಂಜಾ ಸೇದುತ್ತಾ, ಫೋನ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾದ ದೃಶ್ಯಗಳು ಹರಿದಾಡುತ್ತಿವೆ.