ಹಾಸನ : ವಾಲ್ಮೀಕಿ ಹಗರಣ, ಮುಡಾ ಹಗರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳಿಂದ ಮುಜುಗರಕ್ಕೆ ಈಡಾಗಿತ್ತು. ಈ ಬಾರಿಯ 3 ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಅಂತ ಅಂದಾಜಿಸಲಾಗಿತ್ತು. ಆದರೆ ನಿನ್ನೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಡಿಸೆಂಬರ್ 5 ರಂದು ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.
ಹೌದು ಸಾಲು ಸಾಲು ಆರೋಪ, ವಿಪಕ್ಷಗಳ ಹೋರಾಟದಿಂದ ಬೆಂಡಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಚುನಾವಣೆ ಫಲಿತಾಂಶ ಹೊಸ ಭರವಸೆ ನೀಡಿದೆ. ಪಕ್ಷಕ್ಕೆ ಹೊಸ ಉತ್ಸಾಹ ದೊರೆತಿರುವ ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಅವರ ಬೆಂಬಲಿಗ ಸಚಿವರು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಸರ್ಕಾರ ಹೊರತುಪಡಿಸಿ, ಅಭಿಮಾನಿಗಳಿಂದಲೇ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಾಲು ಸಾಲು ಆರೋಪ ಮಾಡಿ ಜೆಡಿಎಸ್, ಬಿಜೆಪಿ ನಡೆಸಿದ ಹೋರಾಟಕ್ಕೆ ತಮ್ಮ ಬೆಂಬಲಿಗರ ಮೂಲಕ ಸೆಡ್ಡು ಹೊಡೆಯಲು ಮುಂದಾಗಿರುವ ಸಿದ್ದರಾಮಯ್ಯ, ಅದಕ್ಕಾಗಿ ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಪ್ರದಾನಿ ದೇವೇಗೌಡರ ಕರ್ಮಭೂಮಿ, ತವರು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಬೆಂಬಲಿಗರ ಸಮಾವೇಶ ನಡೆಸುವ ಮೂಲಕ ವಿರೋಧಿಗಳಿಗೆ ಸೆಡ್ಡು ಹೊಡೆಯುವುದರ ಜೊತೆಗೆ, ಪಕ್ಷದೊಳಗಿನ ತಮ್ಮ ವಿರೋಧಿಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಇಂದು ಸಚಿವರಾದ ಎಚ್ಸಿ ಮಹದೇವಪ್ಪ, ಕೆಎನ್ ರಾಜಣ್ಣ, ಪಿರಿಯಾಪಟ್ಟಣ ವೆಂಕಟೇಶ, ಬೋಸರಾಜು, ಶಾಸಕರಾದ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಸಿದ್ದು ಪುತ್ರ ಯತೀಂದ್ರ ಸಭೆ ನಡೆಸಿ ಸಮಾವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಬಂದು ಕೇಳಿಕೊಂಡರು. ಹಾಗಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ, 40 ವರ್ಷ ಅತ್ಯಂತ ಕ್ಲೀನ್ ಇಮೆಜ್ನಿಂದ ರಾಜಕೀಯ ನಡೆಸಿದ ಸಿದ್ದರಾಮಯ್ಯ ಅವರ ಹೆಸರಿಗೆ ಕುಂದು ತರುವ ಕೆಲಸ ನಡೆದಿದ್ದು, ಇದರ ವಿರುದ್ಧ ಅವರ ಅಭಿಮಾನಿಗಳೇ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎಂದು ಸಚಿವ HC ಮಹದೇವಪ್ಪ ತಿಳಿಸಿದ್ದಾರೆ.