ಬೆಂಗಳೂರು : ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿದ ಬೆನ್ನಲ್ಲೇ, ಮಾಜಿ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಗುರುತರ ಆರೋಪವನ್ನು ಮಾಡಿದ್ದಾರೆ.
2018ರ ಅಸೆಂಬ್ಲಿ ಚುನಾವಣೆಯಲ್ಲಿ ಏನಾಗಿತ್ತು ಗೊತ್ತಾ? ಚಾಮುಂಡೇಶ್ವರಿಯಲ್ಲಿನ ಗ್ರೌಂಡ್ ರಿಪೋರ್ಟ್ ಸರಿಯಿರಲಿಲ್ಲ, ಅದಕ್ಕಾಗಿ ಬಾದಾಮಿಯಲ್ಲೂ ಸಿದ್ದರಾಮಯ್ಯ ಕಣಕ್ಕಿಳಿದಿದ್ದರು. ಎರಡು ಕಡೆ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ, ಮೂರು ಸಾವಿರ ಮತವನ್ನು ಖರೀದಿಸದಿದ್ದರೆ ಅಲ್ಲೂ ಸೋಲುತ್ತಿದ್ದರು ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿಗಳು ಬಾದಾಮಿ ಕ್ಷೇತ್ರದಲ್ಲಿ ಮೂರು ಸಾವಿರ ಮತಗಳನ್ನು ಖರೀದಿ ಮಾಡಿ ಗೆದ್ದದ್ದು ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಇಬ್ರಾಹಿಂ ನಮ್ಮ ಪಕ್ಷದವರಲ್ಲ. ನಾನು ನಾಮನಿರ್ದೇಶನ ಸಲ್ಲಿಸಲು ಹಾಗೂ ಪ್ರಚಾರಕ್ಕಾಗಿ ಬಾದಾಮಿಗೆ ಹೋಗಿದ್ದೆ. ಅದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ. ನಾನು 1,600 ಮತಗಳಿಂದ ಗೆದ್ದಿದ್ದು. ಈ ವಿಚಾರ ನನಗೆ ಹೊಸದು, ಈ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಚಾಮುಂಡೇಶ್ವರಿಯಲ್ಲಿ ನಿಮಗೆ ವ್ಯತಿರಿಕ್ತ ಪರಿಸ್ಥಿತಿಯಿದೆ, ನೀವು ಇನ್ನೊಂದು ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಿ ಎನ್ನುವ ಸಲಹೆಯನ್ನು ನಾನು ಸಿದ್ದರಾಮಯ್ಯನವರಿಗೆ ನೀಡಿದ್ದೆ. ಅದರಂತೆಯೇ, ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಿದರು. ನನ್ನ ಊಹೆ ನಿಜವಾಯಿತು, ಭಾರೀ ಅಂತರದಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು ಎಂದು ಇಬ್ರಾಹಿಂ ಹೇಳಿದ್ದಾರೆ.