ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಭಾರಿ ಸಂಕಷ್ಟ ಎದುರಾಗಿದ್ದು, ಇದರ ಮಧ್ಯ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ವಾದಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರೇ ಕೊನೆಯ ಮುಖ್ಯಮಂತ್ರಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಸಿದ್ದರಾಮಯ್ಯ ನಂತರ ಯಾರೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಲ್ಲ. ಬಹಳ ಮಂದಿ ಸಿಎಂ ಪಾಳಿಯಲ್ಲಿದ್ದಾರೆ. ಗೋರಿಗೆ ಹೋಗುವವರೂ ಸಹ ಪಾಳಿ ಹಚ್ಚಿದ್ದಾರೆ. ಕೋರ್ಟ್ ಆದೇಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಸೂಕ್ತ ಎಂದು ತಿಳಿಸಿದರು.
ಅಧಿಕಾರದಲ್ಲಿ ಇದ್ದರೆ ತನಿಖೆ ಮೇಲೆ ಪ್ರಭಾವ ಬೀರೋದು ಖಚಿತ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಏನು ಮಾತನಾಡಿದ್ದರು ನೆನಪಿಸಿಕೊಳ್ಳಲಿ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಯಾವುದೇ ತನಿಖೆ ಎದುರಿಸುವುದು ಸರಿಯಲ್ಲ, ಹೈಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದರು.