ಬೆಂಗಳೂರು : ರಾಜ್ಯದಲ್ಲಿ ಇದೀಗ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಮುಡಾ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಆರೋಪಗಳ ಮೇಲೆ ಆರೋಪಗಳು ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಇದೀಗ ಸಿದ್ದರಾಮಯ್ಯ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಬಳಿ ಮುಡಾದ ಮೂಲ ದಾಖಲೆಗಳಿವೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಆರೋಪ ಮಾಡಿದ್ದಾರೆ.
ಹೌದು ಮುಡಾ ಹಗರಣದ ಮೂಲ ದಾಖಲೆಗಳು ಸಿಎಂ ಸಿದ್ದರಾಮಯ್ಯ ಅವರ ಬಳಿ ಇವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಡಿಸಿ, ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಸೇರಿ ಹಲವರಿಗೆ ಪತ್ರ ಬರೆದಿದ್ದಾರೆ. ಆರ್ಟಿಐನಲ್ಲಿ ದಾಖಲೆ ಕೇಳಿದ್ದೆ ಆದರೆ, ಮುಡಾ ಕಚೇರಿ ಕೊಟ್ಟಿಲ್ಲ. ಬದಲಿಗೆ ಆ ದಾಖಲೆಗಳನ್ನ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯರಿಗೆ ಆ ದಾಖಲೆಗಳು ಹೇಗೆ ಸಿಕ್ಕವು ಎಂದು ಪ್ರಶ್ನಿಸಿದ್ದಾರೆ.
ಆ ದಾಖಲೆ ಸಿಎಂ ಅವರ ಮನೆಯಲ್ಲೇ ಇರಬೇಕು. ಈ ಕುರಿತು ಸ್ಪಷ್ಟನೆ ನೀಡುವಂತೆ, ಜೊತೆಗೆ ಆದಷ್ಟು ಬೇಗ ಕೇಳಿರುವ ದಾಖಲೆ ನೀಡುವಂತೆ ಪತ್ರ ಬರೆದಿದ್ದಾರೆ. ದಾಖಲೆ ನೀಡದಿದ್ದರೆ ಈ ವಿಚಾರ ಕೋರ್ಟ್ ಗಮನಕ್ಕೆ ತಂದು ದೂರು ದಾಖಲಿಸುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ.