ಬೆಂಗಳೂರು : ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡ ಹೋರಾಟಗಾರರ ಸಮಿತಿ ಯಿಂದ ಭಾನುವಾರ ಅರಮನೆ ಮೈದಾನ ದಲ್ಲಿ ನಡೆದ ಜನ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು, ಅನ್ಯಜಾತಿಯ ಯುವಕನನ್ನು ವಿವಾಹ ಆಗಿದ್ದ ಕಾರಣಕ್ಕೆ ತಂದೆಯೊಬ್ಬರು ಗರ್ಭಿಣಿ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದ ರಾಮಯ್ಯ, ಹುಬ್ಬಳ್ಳಿ ಸೇರಿ ಇತರೆಡೆ ನಡೆದ ಮರ್ಯಾದಾ ಹತ್ಯೆ ಕುರಿತ ವಿಚಾರ ಗಮನಕ್ಕಿದೆ. ಇದರ ತಡೆಗೆ ಕಾನೂನು ಜಾರಿಗೊಳಿಸಲು ಒತ್ತಾಯವಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಾನ್ಯ ಪಾಟೀಲ್ ಎಂಬಾಕೆ ಯನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದ.
ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ಗರ್ಭಿಣಿ ಪುತ್ರಿಯನ್ನೇ ಹತ್ಯೆ ಮಾಡಿದ್ದ. ಈ ಪ್ರಕರಣ ಭಾರಿ ಚರ್ಚೆ ಆಗಿತ್ತು. ಆದರೆ, ಕೇವಲ ಕಾನೂನು ತಂದರೆ ಸಾಲದು ಅದನ್ನು ಜಾರಿ ಮಾಡುವ ಕೆಲಸ ಕೂಡ ಗಂಭೀರವಾಗಿ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ ಎಂದು ಹೇಳಿದರು.
ಗರ್ಭಿಣಿ ಮಗಳನ್ನೇ ಕೊಂದ ಪ್ರಕರಣ:
ಇತ್ತೀಚೆಗೆ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ತಂದೆಯಿಂದ ಹತ್ಯೆಯಾದ ಮಾನ್ಯ ಮತ್ತು ಮದುವೆಯಾದ ಹುಡುಗ ವಿವೇಕಾನಂದ ಇಬ್ಬರನ್ನೂ ಬೇರೆ ಬೇರೆ ಜಾತಿಯಾಗಿದ್ದರಿಂದ ತಂದೆಯೇ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆ ಮೇ ತಿಂಗಳಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆ ನಂತರ ಇಬ್ಬರೂ ಪ್ರಾಣ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದರು.
ಇತ್ತೀಚೆಗೆ ವಾಪಸ್ ಇನಾಂ ವೀರಾಪುರಕ್ಕೆ ಹುಡುಗಿಯ ಬಂದು ಸಂಸಾರ ನಡೆಸುತ್ತಿದ್ದರು. ಮಗಳು ವಾಪಸ್ ಬಂದಿರುವ ಮಾಹಿತಿ ತಿಳಿದ ಹುಡುಗಿಯ ತಂದೆ ಹಾಗೂ ಕುಟುಂಬಸ್ಥರು ಜಮೀನಿನಲ್ಲಿ ಕೆಲಸಮಾಡುತ್ತಿದ್ದ ವಿವೇಕಾನಂದ ಹಾಗೂ ಆತನ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟಾಗಿ ಸುಮ್ಮನಾಗದೆ ಹುಡುಗನ ಮನೆಗೆ ತೆರಳಿ ಮಗಳು ಮಾನ್ಯ ಸೇರಿದಂತೆ ಮನೆಯಲ್ಲಿ ಇದ್ದ ಎಲ್ಲರ ಮೇಲೆ ಹಲ್ಲೆ ಮಾಡಿದ್ದರು. ತನ್ನ ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆಂದು ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗಳಿಂದಾಗಿ ಮಗಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಳು.








