ಚಿಕ್ಕಬಳ್ಳಾಪುರ : ಇತ್ತೀಚಿನ ಪೀಳಿಗೆಯಂತೂ ಬಹಳ ಸೂಕ್ಷ್ಮ ಮನಸ್ಸು ಉಳ್ಳವರಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಗದರಿದರೂ ಏನಾದರೂ ಒಂದು ಅನಾಹುತ ಮಾಡಿಕೊಳ್ಳುತ್ತಾರೆ.ಇದೀಗ ಸಾಲ ಮಾಡಿ ಬೈಕ್ ಕೊಂಡಿದ್ದ ಯುವಕನಿಗೆ ಪೋಷಕರು ತಿಂಗಳು ತಿಂಗಳು ಇಎಂಐ ಹೇಗೆ ಕಟ್ತೀಯಾ? ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬೆಳವಂಗಲ ಎಂಬಲ್ಲಿ ನಡೆದಿದೆ.
ಹೌದು ದೊಡ್ಡಬೆಳವಂಗಲದ ಮಾಡೇಶ್ವರ ಗ್ರಾಮದ ನಿಖಿಲ್ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ಇದ್ದ ಕೆಲಸ ಬಿಟ್ಟು, ಈಗ ಬೈಕ್ ಇಎಂಐ ಕಂತು ಹೇಗೆ ಕಟ್ತೀಯಾ? ಎಂದು ತಂದೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಘಟನೆ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡ ನಿಖಿಲ್ ಹಿಂದೆ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಹಸು ಮೇಯುಸುತ್ತಿದ್ದ. ಅಲ್ಲದೇ ಇತ್ತೀಚೆಗಷ್ಟೇ ಸಾಲ ಮಾಡಿ ಬೈಕ್ ಖರೀದಿಸಿದ್ದ. ಇದಕ್ಕೆ ಪೋಷಕರು ತಿಂಗಳು ತಿಂಗಳು ಇಎಂಐ ಹೇಗೆ ಕಟ್ತೀಯಾ ಎಂದು ಬೈದು ಬುದ್ಧಿವಾದ ಹೇಳಿದ್ದರು.ಪೋಷಕರ ಮಾತಿಗೆ ಬೇಸತ್ತು, ಹಸು ಮೇಯಿಸಲು ತೆರಳಿದ್ದ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.