ಬೆಂಗಳೂರು : ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22ರಂದು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು, ಈ ವಿಚಾರವಾಗಿ ನಿನ್ನೆ ಹಾಗೂ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಯಿತು. ಇದೀಗ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಲ್ಲಿ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವುದಿಲ್ಲ. ಸಮೀಕ್ಷೆಯ ಬಗ್ಗೆ ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಿದ್ದಾರೆ.ಸಚಿವರು ಕೂಡ ವಿರೋಧಿಸಬೇಕು ಎಂದು ಬಿಜೆಪಿ ಹೇಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು ನಿನ್ನ ಸಂಪುಟ ಸಭೆಯಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಿರುವುದರಿಂದ ಜಾತಿಗಣತಿ ಗೊಂದಲದ ಗೂಡಾಗಿದೆ. ಇದುವರೆಗೆ ವಿಪಕ್ಷ ಬಿಜೆಪಿ ಮಾತ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆಗೆಲ್ಲಾ ಇದರಲ್ಲಿ ತಪ್ಪೇನಿದೆ? ಮತಾಂತರವಾದವರಿಗೆ ಸವಲತ್ತು ಸಿಗುವುದು ಬೇಡ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ಆದರೆ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದರಿಂದ ಹೊಸ ಜಾತಿ ಸೃಷ್ಟಿಗೆ ಬ್ರೇಕ್ ಹಾಕಲು ತೀರ್ಮಾನಿಸಿದ್ದಾರೆ. ಯಾರಿಗೂ ಜಗ್ಗದ ಸಿಎಂ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದಕ್ಕೆ ಬೆಲೆ ಕೊಡಲೇಬೇಕಾಯಿತು.