ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಎಂಡಿಎಂಎ ಅನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಕೇರಳ ಮೂಲದ ಐವರನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳನ್ನು ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಅಬ್ದುಲ್ ಶಾಕೀರ್ (24), ಹಸನ್ ಆಶೀರ್ (34), ಮೊಹಮ್ಮದ್ ನೌಷಾದ್ (22), ಯಾಸೀನ್ ಇಮ್ರಾಜ್ ಅಲಿಯಾಸ್ ಇಂಬು (35), ಕೇರಳದ ಕಣ್ಣೂರು ಜಿಲ್ಲೆಯ ರಿಯಾಜ್ ಎ.ಕೆ. (31) ಎಂದು ಗುರುತಿಸಲಾಗಿದೆ. ಮಾಹಿತಿ ಬಂದ ಬಳಿಕ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಬಳಿ ದಾಳಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3,50,000 ರೂ. ಮೌಲ್ಯದ 70 ಗ್ರಾಂ ಎಂಡಿಎಂಎ, 5 ಮೊಬೈಲ್ ಫೋನ್ಗಳು, 1460 ರೂ. ನಗದು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಸೊತ್ತಿನ ಒಟ್ಟು ಮೌಲ್ಯ 4,25,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.