ಬೆಂಗಳೂರು : ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಕೊಲ್ಕತ್ತಾ ಪಂದ್ಯ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದಿದ್ದರಿಂದ ಪಂದ್ಯ ರದ್ದಾಗಿದೆ. ಇದಕ್ಕೂ ಮೂರು ದಿನಗಳ ಮುನ್ನ ಸ್ಟೇಡಿಯಂ ಗೆ ನುಗ್ಗಿ ವಿರಾಟ್ ಕೊಹ್ಲಿ ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಚಾಲೆಂಜ್ ಮಾಡಿ ವಿಡಿಯೋ ಹಾಕಿದ್ದ ಯುವಕನನ್ನು ಇದೀಗ ಅಶೋಕ್ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಸ್ಟೇಡಿಯಂಗೆ ನುಗ್ಗಿ ಕೊಹ್ಲಿಯನ್ನು ಅಪ್ಪಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಕುಬ್ಜ ಶರಣ್ ಎನ್ನುವ ಯುವಕ ವಿಡಿಯೋ ಹಾಕಿದ್ದ. ಇದೀಗ ವಿಡಿಯೋಗೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಈ ರೀತಿ ಮತ್ತೆ ಯಾರೇ ಮಾಡಿದರು ಎಫ್ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ. ಹುಚ್ಚಾಟ ಮೆರೆಯುವ ಪುಂಡರಿಗೆ ಬೆಂಗಳೂರು ಪೊಲೀಸರು ಖಡಕ್ ಸಂದೇಶ ನೀಡಿದ್ದಾರೆ. ಪ್ರಾಂಕ್ ಹೆಸರಿನಲ್ಲಿ ಹುಚ್ಚಾಟ ಮೆರೆಯುವವರ ಮೇಲು ಬೆಂಗಳೂರು ಪೊಲೀಸರು ಕಣ್ಣಿಟ್ಟಿದ್ದಾರೆ.
ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ?
ಇನ್‌ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದು, ಸ್ಟೇಡಿಯಂಗೆ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವಿಡಿಯೋ ಮಾಡಿರುವ ಶರಣ್, ಮೊನ್ನೆ ನಾನೊಂದು ವಿಡಿಯೋ ಮಾಡಿದ್ದೆ. ಇವತ್ತಿನ ಮ್ಯಾಚ್‌ನಲ್ಲಿ ಗ್ರೌಂಡ್‌ಗೆ ನುಗ್ಗಿ ಕೊಹ್ಲಿ ಅವರನ್ನು ಹಗ್ ಮಾಡುವೆ ಎಂದು ಹೇಳಿದ್ದೆ. ಆದರೆ, ಆ ರೀತಿ ಮಾಡಕ್ಕೆ ಆಗಲ್ಲ. ಯಾಕೆಂದರೆ ಇದು ಕಾನೂನು ಬಾಹಿರ. ಈ ರೀತಿ ಸವಾಲು ಹಾಕಿದ್ದಕ್ಕೆ ದಯವಿಟ್ಟು ಕ್ಷಮೆ ಇರಲಿ, ಯಾರೂ ಹೀಗೆ ಮಾಡಬೇಡಿ ಎಂದು ಹೇಳಿದ್ದಾನೆ.
ಯುವಕ ಹಾಕಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಹಲವರು ಕೊಹ್ಲಿಯನ್ನು ಭೇಟಿ ಮಾಡುವ ಅವಕಾಶ, ಹಗ್ ಮಾಡುವ ಅವಕಾಶ ಪೆಡೆಯುತ್ತಿರುವ ನೀವೇ ಧನ್ಯರು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪೊಲೀಸರು ಇಲ್ಲೊಬ್ಬ ನಿಯಮ ಉಲ್ಲಂಘಿಸಲು ಸಜ್ಜಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇತ್ತ ಪೊಲೀಸರು ಯುವಕ ಶರಣ್‌ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ. ಪೊಲೀಸರ ಸೂಚನೆಯಂತೆ ವಿಡಿಯೋವನ್ನು ಅಭಿಮಾನಿ ಶರಣ್ ಡಿಲೀಟ್ ಮಾಡಿದ್ದಾನೆ.
ಪೊಲೀಸರ ಕರೆಯಿಸಿ ಕಬ್ಬನ್ ಪಾರ್ಟ್ ಪೊಲೀಸ್ ಠಾಣೆಯಲ್ಲೇ ಕೂರಿಸಿದ ಕಾರಣ ಈತನ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಯ್ತು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ದಯವಿಟ್ಟು ಕ್ಷಮಿಸಿ, ನಾನು ಹಾಕಿದ ಚಾಲೆಂಜ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇವತ್ತು ಮ್ಯಾಚ್ ಇದೆ ಎಂದು ಪೊಲೀಸರು ಕಬ್ಬನ್ ಪಾರ್ಕ್ ಠಾಣೆಗೆ ಕರೆಯಿಸಿ ಕೂರಿಸಿದ್ದಾರೆ. ಮ್ಯಾಚ್ ಮುಗಿಯುವ ವರೆಗೂ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ದಯವಿಟ್ಟು ಕ್ಷಮಿಸಿ ಎಂದು ಶರಣ್ ಹೇಳಿದ್ದಾರೆ. ಇದೀಗ ಅಶೋಕ್ ನಗರ ಪೊಲೀಸರು ಯುವಕನನ್ನು ಅರೆಸ್ಟ್ ಮಾಡಿ FIR ದಾಖಲಿಸಿದ್ದಾರೆ.