ಚಿಕ್ಕಬಳ್ಳಾಪುರ : ವಿಚ್ಛೇದಿತ ಮಹಿಳೆಯರನ್ನು ಮರುಮದುವೆಯಾಗುವುದಾಗಿ ವಂಚಿಸಿದ್ದ ಪ್ರಕರಣದ ಆರೋಪಿ ಸಿ.ಎಂ. ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಮನೆಯಲ್ಲಿ ನೇಣು ಬಿಗಿದು ಗಿರೀಶ್ ಸೂಸೈಡ್ ಮಾಡಿಕೊಂಡಿದ್ದು, ವಂಚನೆ ಪ್ರಕರಣ ಸಂಬಂಧ ನಾಲ್ವರು ಸಂತ್ರಸ್ತೆಯರು ಈತನ ವಿರುದ್ಧ ದೂರು ನೀಡಿದ್ದರು.ದೂರು ದಾಖಲಾಗುತ್ತಿದ್ದಂತೆ ಭಯದಿಂದ ಗಿರೀಶ್ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಹಿನ್ನೆಲೆ?
ಸಿ.ಎಂ.ಗಿರೀಶ್ ಅಲಿಯಾಸ್ ಸಾಯಿಸುದೀಪ್ ಎನ್ನುವ ಈತ ಒಬ್ಬಂಟಿ ವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ. ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು, ಮರುಮದುವೆ ಹೆಸರಲ್ಲಿ ಅವರನ್ನು ಪುಸಲಾಯಿಸುತ್ತಿದ್ದ. ಲೈಂಗಿಕವಾಗಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ವಿಡಿಯೋ ಮತ್ತು ಆಡಿಯೋಗಳನ್ನು ಇಟ್ಟುಕೊಂಡಿದ್ದ. ನಂದಗುಡಿ, ಬೆಂಗಳೂರು, ಚಿಕ್ಕಬಳ್ಳಾಪುರ, ಬಂಗಾರಪೇಟೆ ಸೇರಿದಂತೆ 5ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ, ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿತ್ತು.
ಮರುಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಬೆಂಗಳೂರಿನ ಮಹಿಳೆಯಿಂದ 25 ಲಕ್ಷ ಹಣ ಪಡೆದು ವಂಚನೆ, ಚಿಕ್ಕಬಳ್ಳಾಪುರ ಮೂಲದ ಸರ್ಕಾರಿ ಉದ್ಯೋಗಿ ಮಹಿಳೆ ಬಳಿ 5 ಲಕ್ಷ ಹಣ ಪಡೆದು ಕಿರುಕುಳ, ಕೆ.ಆರ್.ಪುರಂ ಮೂಲದ ವಿವಾಹಿತ ಆಂಟಿ ಬಳಿ ಮಾಂಗಲ್ಯ ಚೈನ್, ಕಿವಿಯೋಲೆ ಸೇರಿದಂತೆ 40 ಗ್ರಾಮ್ ಚಿನ್ನ ತೆಗೆದುಕೊಂಡು ಮೋಸ ಮತ್ತು ಹೋಸಕೋಟೆಯ ನಂದಗುಡಿಯಲ್ಲಿ ಶ್ರೀಮಂತ ಯುವತಿಯನ್ನು ಮದುವೆಯಾಗಿ ಹಣಕ್ಕಾಗಿ ಪೀಡನೆ, ಬಂಗಾರಪೇಟೆಯಲ್ಲಿ ಆಂಟಿಯನ್ನು ಬುಟ್ಟಿಗೆ ಹಾಕಿಕೊಂಡು ಕಿರುಕುಳ ನೀಡಿರುವ ಆರೋಪಗಳು ಗಿರೀಶ್ ಮೇಲೆ ಕೇಳಿಬಂದಿದ್ದವು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಅವರ ಮುಂದಾಳತ್ವದಲ್ಲಿ ಸಂತ್ರಸ್ತ ಮಹಿಳೆಯರು ಗಿರೀಶ್ ವಿರುದ್ಧ ಚಿಂತಾಮಣಿ ನಗರಠಾಣೆಗೆ ದೂರು ನೀಡಿದ್ದರು. ಅಲ್ಲದೇ ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಭಯದಿಂದ ಗಿರೀಶ್ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದೆಯೂ ಈತ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.








