ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಚಾಣಕ್ಯ ಎಂದೆ ಹೆಸರುವಾಸಿಯಾಗಿರುವ ಅಮಿತ್ ಶಾ ರಜಕ್ಕೆ ಆಗಮಿಸಿದ್ದು ಇಂದು ಮೈಸೂರಿನಲ್ಲಿ ಬಿಜೆಪಿ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.
ಅಮಿತ್ ಶಾ ಆಗಮನಕ್ಕೂ ಮುನ್ನ ಅವರು ಸಂಚರಿಸುವ ರಸ್ತೆಯಲ್ಲಿ ಕಾರು ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಮೈಸೂರು-ನಂಜನಗೂಡು ರಸ್ತೆ ಮಧ್ಯೆ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿದೆ. ತಕ್ಷಣ ಪೊಲೀಸರು ಆ್ಯಂಬುಲೆನ್ಸ್ ಕರೆಸಿ ಗಾಯಾಳವನ್ನು ಆಸ್ಪತ್ರೆಗೆ ರವಾನಿಸಿದ್ದು, ಅಪಘಾತಕ್ಕೀಡಾಗಿದ್ದ ಕಾರನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ರ್‍ಯಾಡಿಸನ್ ಬ್ಲೂ ಹೋಟೆಲ್ನಿಂದ ಅಮಿತ್ ಶಾ ಅವರು ಬೆಳಗ್ಗೆ 11ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಲಿದ್ದಾರೆ. ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಅಮಿತ್ ಶಾ, ಬಳಿಕ ಮಂಡಕಹಳ್ಳಿ ಏರ್ಪೋರ್ಟ್ಗೆ ತೆರಳಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮಕ್ಕೆ ತೆರಳಲಿದ್ದಾರೆ. ಅಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಊಟ ಸೇವಿಸಲಿರುವ ಅಮಿತ್ ಶಾ, ಮಧ್ಯಾಹ್ನ 2.30ಕ್ಕೆ ಱಡಿಸನ್ ಬ್ಲೂ ಹೋಟೆಲ್ಗೆ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.40ಕ್ಕೆ ಬಿಜೆಪಿ ಪ್ರಮುಖರ ಜತೆ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣಾ ರಣತಂತ್ರ ಕುರಿತು ಸುಮಾರು 2 ಗಂಟೆಗಳ ಕಾಲ ಈ ಸಭೆ ನಡೆಯಲಿದೆ.