ಬೆಂಗಳೂರು : ರಾಜ್ಯದಲ್ಲಿ ಕಳೆದ ಬಿಜೆಪಿ ಅವಧಿಯಲ್ಲಿ 10 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿತ್ತು. ಇದೀಗ ಈ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಈ ಕುರಿತು ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.
ವಿಶ್ವವಿದ್ಯಾಲಯ ಆರ್ಥಿಕ ಸ್ಥಿತಿಗತಿಯ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಬೀದರ್ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಉಳಿದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಇದೀಗ ಸಂಪುಟ ಉಪಸಮಿತಿ ತೀರ್ಮಾನ ಕೈಗೊಂಡಿದೆ. ಹಾಸನ ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಹಾಗೂ ನೃಪತುಂಗ ವಿಶ್ವವಿದ್ಯಾಲಯ ಗೆ ಬೀಗ ಹಾಕುವ ಕುರಿತು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.
150 ಸಂಯೋಜಿತ ಕಾಲೇಜುಗಳನ್ನು ಬೀದರ್ ವಿಶ್ವವಿದ್ಯಾಲಯ ಹೊಂದಿದೆ. ಅಲ್ಲದೆ ಬೀದರ್ ವಿಶ್ವವಿದ್ಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಬಹುತೇಕ ವಿಶ್ವವಿದ್ಯಾಲಯಗಳಿಗೆ ಬೀಗ ಜಡಿಯುವ ಸಾಧ್ಯತೆ ಇದೆ. ಕುಲಪತಿಗೆ ವಾಹನ ಕರುಣಿಸಲು ಹಣಕಾಸಿನ ಕೊರತೆ ಇದೆ.ಹೊಸ ವಿಶ್ವವಿದ್ಯಾಲಯ ನಡೆಸಲು ದೊಡ್ಡ ಮೊತ್ತದ ಹಣ ಸರ್ಕಾರ ನೀಡಬೇಕಿದೆ.
ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ಜಾಗ ಅಗತ್ಯವಿದೆ. ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ ಹಾಗಾಗಿ ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.