ಬೆಂಗಳೂರು : ರಾಜ್ಯದಲ್ಲಿ ಮರ್ಯಾದ ಹತ್ಯೆ ನಿಷೇಧಿಸುವ ಮಾಸೂದೆಗೆ ರಾಜ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯವನ್ನು ಒದಗಿಸಿ, ಜಾತಿ ಆಧಾರಿತ ಅಪರಾಧಗಳನ್ನು ತಡೆಯಲು ಹಾಗೂ ನಿಷೇಧಿಸಲು ಈ ಮಸೂದೆ ಮಂಡನೆ ಮಾಡಲಾಗಿದೆ.
ರಾಜ್ಯದಲ್ಲಿ ಜಾತಿ ಆಧಾರಿತ ಭೇದಭಾವ ಇನ್ನೂ ಕ್ರೂರ ಹಿಂಸಾಚಾರದ ರೂಪದಲ್ಲಿ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಅಂತರ್ಜಾತಿ ವಿವಾಹಗಳ ಮೂಲಕ ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವ ಸಂವಿಧಾನಾತ್ಮಕ ಹಕ್ಕನ್ನು ಬಳಸಿಕೊಳ್ಳುವ ಯುವಕರ ವಿರುದ್ಧ ಗೌರವ ಹತ್ಯೆಗಳಂತಹ ಅಪರಾಧಗಳು ನಡೆಯುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಸೂದೆ ರೂಪಿಸಲಾಗಿದೆ.
ಜಾತಿ ಆಧಾರಿತ ಅಪರಾಧಗಳ ಮೂಲಕ ಮಾನವಹಕ್ಕು ಉಲ್ಲಂಘನೆ ತಡೆಯಲು, ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡಲು, ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇದ ಭಾವವನ್ನು ತಡೆಯಲು ಮತ್ತು ಅಂತರ್ಜಾತಿ ವಿವಾಹವನ್ನು ನೆರವೇರಿಸಲು ‘ಇವ ನಮ್ಮವ ಇವ ನಮ್ಮವ ವೇದಿಕೆ’ ಸ್ಥಾಪಿಸಲು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ.
ಜಾತಿ, ಸಂಸ್ಕೃತಿ, ಸಂಪ್ರದಾಯ, ಗೌರವದಂತಹ ಹೆಸರಲ್ಲಿ ಯಾವುದೇ ವ್ಯಕ್ತಿ ಕೃತ್ಯಗಳನ್ನು ನಡೆಸುವ ಹಾಗಿಲ್ಲ. ಯುವಕರ ವಿರುದ್ಧ ಗೌರವ ಹತ್ಯೆಗಳಂತಹ ಅಪರಾಧಗಳು ಈ ಕಾನೂನಿನಲ್ಲಿ ನಿಷೇಧವಾಗಿದೆ. ಈ ಸಂಬಂಧ ವಿವಾಹಿತ ಅಥವ ಪ್ರೇಮಿಗಳಿಗೆ ಸಂಬಂಧಿಕರು, ಸ್ನೇಹಿತರ ಕೊಲೆ, ದೈಹಿಕ ಹಲ್ಲೆ ಮಾಡುವುದು ಮರ್ಯಾದಾ ಅಪರಾಧ ಎಂದು ಪರಿಗಣಿಸಲಾಗುವುದು.
5 ವರ್ಷ ಕಠಿಣ ಶಿಕ್ಷೆ
ಜೋಡಿಗಳ ಮರ್ಯಾದೆ ಹತ್ಯೆ ಮಾಡಿದರೆ ಕನಿಷ್ಠ ಐದು ವರ್ಷದ ಶಿಕ್ಷೆಗೊಳಗಾಗಲಿದ್ದಾರೆ. ಗಂಭೀರವಾಗಿ ಹಲ್ಲೆ, ಗಾಯ ಮಾಡಿದರೆ ಕನಿಷ್ಠ 3 ವರ್ಷ ಜೈಲು ಹಾಗೂ ಮೂರು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಸಣ್ಣಪುಟ್ಟ ಹಲ್ಲೆ ಮಾಡಿದರೆ ಕನಿಷ್ಠ ಎರಡು ವರ್ಷಗಳ ಕಠಿಣ ಸೆರೆಮನೆವಾಸ ಹಾಗೂ ಎರಡು ಲಕ್ಷ ರೂ.ವರೆಗಿನ ದಂಡ ವಿಧಿಸಬಹುದಾಗಿದೆ.








