ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಆಯೋಗ ರಚನೆಗೆ ಸಂಪುಟ ಅಸ್ತು ಎಂದಿದೆ ಎಂದು ಕ್ಯಾಬಿನೆಟ್ ಸಭೆಯ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಕುರಿತು ಮಾತನಾಡಿ, ಒಳ ಮೀಸಲಾತಿ ಜಾರಿ ಸಂಬಂಧ ಆಯೋಗ ರಚನೆಗೆ ಸಂಪುಟ ಅಸ್ತು ಎಂದಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ. ಆಯೋಗ ರಚಿಸಿ ದತ್ತಾಂಶ ಸ್ವೀಕರಿಸಿ ಮುಂದೆ ನಿರ್ಣಯಿಸಿ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ಆಯೋಗಕ್ಕೆ ಸೂಚನೆ ನೀಡಲಾಗಿದೆ. ಅದಲ್ಲದೆ ಮುಂದಿನ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಇಂದಿನಿಂದ ಯಾವುದೇ ನೇಮಕಾತಿ ನೋಟಿಫಿಕೇಷನ್ ಆದರೂ ಕೂಡ ಆಯೋಗದ ವರದಿ ಆಧರಿಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ.ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಅಲ್ಲದೆ ಹಾಸನ ನಗರ ಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.ಇದೆ ವೇಳೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ನೂತನ ಪ್ರವಾಸೋದ್ಯಮ ನೀತಿ 2024ಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.