ಬೆಂಗಳೂರು : ಕಳೆದ ತಿಂಗಳಷ್ಟೇ ತಂದೆ ತೀರಿ ಹೋಗಿದ್ದರು. ಇದರ ಅಘಾತದಿಂದ ಹೊರ ಬರಲು ಬಳ್ಳಾರಿ ಮೂಲದ ಸಹೋದರರಿಬ್ಬರು ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಟಿಪ್ಪರ್ ಹರಿದು ಇಬ್ಬರು ಸಹೋದರರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಬಳ್ಳಾರಿ ಮೂಲದ ಮಸ್ತಾನ್ ಹಾಗೂ ಮೊಹಮದ್ ಎಂದು ಗುರುತಿಸಲಾಗಿದೆ. ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಮಸ್ತಾನ್ ಮತ್ತು ಮೊಹಮದ್ ಅನ್ನೂ ಇಬ್ಬರು ಸಹೋದರರು ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಯೂಟರ್ನ್ ಪಡೆಯೋಕ್ಕೆ ಮುಂದಾಗ್ತಿದ್ದಂತೆ ಎಂಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ನೋಡ ನೋಡ್ತಿದಂತೆ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಇಬ್ಬರು ಸಹೋದರರು ಕೆಳಗಡೆ ಬಿದ್ದಿದ್ದಾರೆ.
ಈ ವೇಳೆ ಯೂಟರ್ನ್ ಪಡೆಯುತ್ತಿದ್ದ ಬೈಕ್ ಮೇಲೆ ಯಮಸ್ವರೂಪಿ ಟಿಪ್ಪರ್ ಲಾರಿ ಹರಿದ ಪರಿಣಾಮ, ಸ್ಥಳದಲ್ಲೇ ಮಸ್ತಾನ್ ಸಾವನ್ನಪ್ಪಿದ್ದಾರೆ, ಜೊತೆಗೆ ಮೊಹಮದ್ ಮೇಲು ಟಿಪ್ಪರ್ ಹರಿದ ಪರಿಣಾಮ ಕಾಲುಗಳು ನಜ್ಜುಗುಜ್ಜಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತನು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.