ಮೈಸೂರು : ಕುಡಿತದ ಚಟಕ್ಕೆ ಬಿದ್ದಿದ್ದ ಮಗ ತಾಯಿಯ ಬಳಿ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ತಾಯಿ ಹಣ ನೀಡಲು ನಿರಾಕರಿಸಿದಾಗ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕಪ್ಪೆ ಬಳಿಯ ನವಿಲೂರು ಗ್ರಾಮದ ಗೌರಮ್ಮ (60) ಕೊಲೆಯಾದ ಮಹಿಳೆ. ಇವರ ಎರಡನೇ ಮಗ ಸ್ವಾಮಿ (40) ಕೊಲೆ ಆರೋಪಿಯಾಗಿದ್ದು ಪೊಲೀಸರು ಆತನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ತಮ್ಮಯ್ಯ ಅವರು ತಾವು ಸಾಕಿದ್ದ ಒಂದು ಜೊತೆ ಎತ್ತುಗಳನ್ನು ಮಾರಾಟ ಮಾಡಿದ್ದರು. ತನಗೂ ಇದರಲ್ಲಿ ಪಾಲು ಕೊಡಬೇಕು ಎಂದು ಮಗ ಸ್ವಾಮಿ ಆಗಾಗ ಗಲಾಟೆ ಮಾಡುತ್ತಿದ್ದರು.
ಈ ನಡುವೆ ತಮ್ಮಯ್ಯ ಅವರು ಆರೋಗ್ಯ ಸರಿಯಿಲ್ಲದ ಕಾರಣ ಬೈಲುಕುಪ್ಪೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದರು. ಆಗ ಮನೆಯಲ್ಲಿ ತಾಯಿ ಒಬ್ಬರೇ ಮಲಗಿದ್ದರು. ಈ ವೇಳೆ ಕುಡಿಯಲು ಸ್ವಾಮಿ ಹಣ ಕೇಳಿದ್ದಾನೆ. ಆಗ ತಾಯಿ ಕೊಡದೇ ಇದ್ದಾಗ ಕೊಲೆ ಮಾಡಿದ್ದಾನೆ ಎಂದು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.