ಬೆಳಗಾವಿ : ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳ ಮಾರಾಟ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಮಕ್ಕಳ ಕಿಡ್ನಾಪ್ ಕೇಸ್ ಗಳಲ್ಲಿ ಬೆಳಗಾವಿ ಪೊಲೀಸರು ಹಲವು ಪ್ರಕರಣಗಳನ್ನು ಬೇಧಿಸಿದ್ದು, ಇದೀಗ ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ 5 ವರ್ಷದ ಗಂಡು ಮಗುವನ್ನು ಮಾರಿದ್ದ ಪ್ರಕರಣ ಭೇದಿಸಿದ ಹುಕ್ಕೇರಿ ಠಾಣೆ ಪೊಲೀಸರು, ಮಹಾರಾಷ್ಟ್ರದ ಇಬ್ಬರು ಮಹಿಳೆಯರನ್ನು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ಮಾದ್ಯಾಳದ ಸಂಗೀತಾ ಹಮ್ಮನ್ನವರ, ರತ್ನಾಗಿರಿ ಜಿಲ್ಲೆಯ ಚಿಪಳುನ ತಾಲೂಕಿನ ನಿವಳಿಯ ಮೋಹನ ತಾವಡೆ ಮತ್ತು ಆತನ ಪತ್ನಿ ಸಂಗೀತಾ ತಾವಡೆ ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳಾದ ನಂದಕುಮಾರ ಸೀತಾರಾಮ್ ಡೋರಲೇಕರ್ ಮತ್ತು ಆತನ ಪತ್ನಿ ನಂದಿನಿ ನಂದಕುಮಾರ ಡೋರಲೇಕರ್ ಪತ್ತೆಗೆ ಶೋಧ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ. ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಪ್ರಕರಣ ಹಿನ್ನೆಲೆ?
ಸುಲ್ತಾನಪುರದ ಅರ್ಚನಾ ಮಗದುಮ್ಮ ಹಾಗೂ ರಾಜು ಮಗದುಮ್ಮ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಅರ್ಚನಾ ಅವರಿಗೆ ಈ ಹಿಂದೆ ಜನಿಸಿದ್ದ ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಸಂಗೀತಾ ಹಮ್ಮನ್ನವರ ಆ ಮಗುವನ್ನು ಕರೆದೊಯ್ದು, ಮೋಹನ ತಾವಡೆ, ಸಂಗೀತಾ ತಾವಡೆ ಮೂಲಕ ರತ್ನಗಿರಿ ಜಿಲ್ಲೆಯ ನಂದಕುಮಾರ ಮತ್ತು ನಂದಿನಿ ಡೋರಲೇಕರ ದಂಪತಿಗೆ 3.50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಮಗುವಿನ ತಾಯಿ ಜನವರಿ 20ರಂದು ದಾಖಲಿಸಿದ ದೂರು ಆಧರಿಸಿ ತನಿಖೆ ಕೈಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.