ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಮುಡಾ ಅಕ್ರಮ ಸೈಟು ಹಂಚಿಕೆ ಪ್ರಕರಣಗಳು ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ. ಇದೀಗ ಡಿಕೆ ಶಿವಕುಮಾರ್ ಅವರು ಸ್ಪೋಟಕ ವಾದಂತಹ ಹೇಳಿಕೆ ನೀಡಿದ್ದು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಕಾಲದಲ್ಲಿ 300 ಕೋಟಿ ಅಕ್ರಮ ನಡೆದಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಹಲವು ನಿಗಮಗಳಲ್ಲಿ 300 ಕೋಟಿ ರು.ಗೂ ಹೆಚ್ಚಿನ ಅಕ್ರಮವಾಗಿದ್ದು, ಅವೆಲ್ಲವನ್ನು ಸದನದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿಗರು ಭ್ರಷ್ಟಾಚಾರದ ಪಿತಾಮಹರಿದ್ದ ಹಾಗೆ. ಅವರೆಲ್ಲ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸುತ್ತೇವೆ. ಅಲ್ಲದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದನದಲ್ಲಿ ಬಯಲು ಮಾಡುತ್ತೇವೆ. ಅಕ್ರಮಗಳ ಹಿಂದೆ ಯಾರ್ಯಾರಿದ್ದಾರೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ 87 ಕೋಟಿ ರು., ಎಪಿಎಂಸಿಯ 47 ಕೋಟಿ ರು., 2019ರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯ 22 ಕೋಟಿ ರು., 2018ರಲ್ಲಿ ಅಂಬೇಡ್ಕರ್ ನಿಗಮದ 5 ಕೋಟಿ ರು. ದೇವರಾಜ ಅರಸು ಟ್ರಕ್ ಟರ್ಮಿನಲ್ನ 47 ಕೋಟಿ ರು., ಮಾಲಿನ್ಯ ನಿಯಂತ್ರಣ ಮಂಡಳಿಯ 10 ಕೋಟಿ ರು. ಹಾಗೂ ಕೆಐಡಿಬಿಗೆ ಸೇರಿದ ಹಣ ಸೆಲಂಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ವಿವಿಧ ನಿಗಮಗಳಲ್ಲಿ ಈ ಎಲ್ಲದರ ಭಾರೀ ಅಕ್ರಮದ ಕುರಿತು ಸದನದಲ್ಲಿ ಮಾಹಿತಿ ನೀಡುವೆ ಎಂದರು.