ಬೆಂಗಳೂರು : ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮಧ್ಯೆ ಇರುವಂತಹ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವಾಹನಗಳ ಸಂಚಾರ ಬ್ಯಾನ್ ಮಾಡಿದ್ದು, ಆದರೆ ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಿನ್ನೆ ವಿಕಾಸ ಸೌಧದಲ್ಲಿ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪ್ರಸ್ತುತ ರಾತ್ರಿ 9 ಗಂಟೆಯ ವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅದರ ಹೊರತಾಗಿ ಕರ್ನಾಟಕ ಮತ್ತು ಕೇರಳದ ತಲಾ 1 ಬಸ್‌ಗಳು ರಾತ್ರಿ ವೇಳೆ ಸಂಚರಿಸುತ್ತಿವೆ ಹಾಗೂ ವೈದ್ಯಕೀಯ ತುರ್ತು ಸಂದರ್ಭದಲ್ಲಿ ವಾಹನಗಳನ್ನು ಪರಿಶೀಲಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಇನ್ನು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವ ಕಾಮಗಾರಿಗೆ ಬದಲಾಗಿ ಕ್ಯಾಂಪಾ ನಿಧಿ ಸಂಗ್ರಹಿಸಲಾಗುತ್ತದೆ ಹಾಗೂ ಆ ಹಣವನ್ನು ಆಯಾ ರಾಜ್ಯಗಳಿಗೆ ಹಂಚಿಕೆ ಮಾಡಬೇಕಿದೆ. ಆದರೆ, ಕ್ಯಾಂಪಾದಲ್ಲಿ ರಾಜ್ಯದ ಪಾಲಾದ 1,400 ರೂ. ಕೋಟಿ ಇದ್ದು, ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳ ಅರಣ್ಯ ಸಚಿವರ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.