ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಸಂಚುಕೋರ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.
ಹೌದು ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಕೊಲೆ ಮಾಡಲಾಗಿತ್ತು. ಈ ಕುರಿತು 2022ರ ಜು.27ರಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎನ್ಐಎ ಪ್ರಕರಣ ಕೈಗೆತ್ತಿಕೊಂಡ ಬಳಿಕ 2022ರ ಆ.4ರಂದು ಪ್ರಕರಣವನ್ನು ಮರು ದಾಖಲಿಸಿತ್ತು.ನೆಟ್ಟಾರು ಕೊಲೆ ಪ್ರಕರಣದಲ್ಲಿ ಇದುವರೆಗೆ 19 ಆರೋಪಿಗಳನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿ ಮುಸ್ತಫಾ ಪೈಚಾರ್ನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮೇ10ರಂದು ಮನ್ಸೂರ್ಪಾಷಾ ಎಂಬಾತನ ಜತೆ ಬಂಧಿಸಲಾಗಿತ್ತು. ಮುಸ್ತಫಾ ಪೈಚಾರ್ ಪ್ರಕರಣದ ಪ್ರಮುಖ ಸಂಚುಕೋರನಾಗಿದ್ದು, ರಾಜ್ಯ ದಲ್ಲಿ ಪಿಎಫ್ಐ ಸೇವಾ ತಂಡದ ಮಾಸ್ಟರ್ ಟೈನರ್ ಆಗಿದ್ದ ಎಂದು ತಿಳಿದುಬಂದಿದೆ.ಇದೀಗ ಮುಸ್ತಫಾ ಪೈಚಾರ್ ಗೆ ಆಶ್ರಯ ನೀಡಿದ್ದ ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.