ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ಇದೀಗ ಆರೋಪಿ ಮುಜಾಮಿಲ್ ಶರೀಫ್ ನನ್ನು ಬಂಧಿಸಿದ್ದಾರೆ. ಬಾಂಬ್ ತಯಾರಿಕೆಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಬಾಂಬರ್ ಗೆ ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದ ಎನ್ನಲಾಗುತ್ತಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದೆ. ಘಟನೆ ಸಂಬಂಧ ಬೆಂಗಳೂರು ಮೂಲದ ಇಬ್ಬರನ್ನು ಶನಿವಾರವಷ್ಟೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎನ್‌ಐಎ ಮತ್ತೆ ದಾಳಿ ಹಾಗೂ ಶೋಧ ಕಾರ್ಯ ಮುಂದುವರಿಸಿತ್ತು. ಇದೀಗ ಶಂಕಿತರ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆದಿದೆ. ಸದ್ಯ ವಶಕ್ಕೆ ಪಡೆಯಲಾಗಿರುವ ಇಬ್ಬರು ನಿಷೇಧಿತ ‘ಅಲ್ ಹಿಂದ್ ಟ್ರಸ್ಟ್’ ಜೊತೆ ನಂಟು ಹೊಂದಿದ್ದರು.
ಚೆನ್ನೈನಲ್ಲಿ ಹಳೆಯ ವಾಷರ್‌ಮನ್‌ಪೇಟ್, ಮನ್ನಾಡಿ ಮತ್ತು ರಾಯಪೆಟ್ಟಾ ಸೇರಿದಂತೆ ಹಲವು ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಲಾಗಿತ್ತು. ರಾಮನಾಥಪುರಂನಲ್ಲಿರುವ ಶೀಕ್ ದಾವೂದ್ ಮತ್ತು ಆತನ ತಂದೆಯ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿತ್ತು. ಬುಧವಾರ ಹಲವು ಮೊಬೈಲ್ ಫೋನ್ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೆಲವು ವರ್ಷಗಳ ಹಿಂದೆ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಎನ್‌ಐಎ ಈ ಹಿಂದೆ ಎರಡು ಬಾರಿ ಶೀಕ್ ನಿವಾಸದಲ್ಲಿ ಶೋಧ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.