ಬೆಂಗಳೂರು : ಪುಲ್ವಾಮಾ ದಾಳಿ ನಂತರ ಇಲ್ಲಿಯವರೆಗೆ ಇಂತಹ ದುರ್ಘಟನೆಗಳು ನಡೆದಿರಲಿಲ್ಲ. ಹಿಂದೂಗಳನ್ನು ಗುರಿ ಮಾಡಿದ್ದಾರೆ. ದಾಳಿ ವೇಳೆ ನೀನು ಹಿಂದೂ ಅದಕ್ಕಾಗಿ ಕೊಲ್ಲುತ್ತಿದ್ದೇವೆ ಎಂದು ಭಯೋತ್ಪಾದಕರು ಹೇಳಿಕೊಂಡಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ಇದು ಹೊಸದಲ್ಲ ಅನ್ನಿಸುತ್ತದೆ. ದಾಳಿ ಮಾಡುವಾಗ ಅನೇಕ ಸಂದರ್ಭದಲ್ಲಿ ಆ ಮಾತುಗಳನ್ನು ಹೇಳಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಹಳ ಶಕ್ತಿಯುತ, ಪರಿಣಾಮಕಾರಿಯಾದ ಮಿಲಿಟರಿ ಇಂಟೆಲಿಜೆನ್ಸ್ ಇದ್ದರೂ ಸಹ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹೇಗಾಯ್ತು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ.ಅನೇಕ ಸಂದರ್ಭಗಳಲ್ಲಿ ಮಿಲಿಟರಿ ಇಂಟಲಿಜೆನ್ಸ್ ಒಳ್ಳೆಯ ಕೆಲಸ ಮಾಡಿದೆ. ಯಾಕೆ ಇಂಟಲಿಜೆನ್ಸ್ ಫೆಲ್ಯೂರ್ ಆಯ್ತು?. ಟೆರರಿಸ್ಟ್‌ಗಳು ಎಲ್ಲಿಂದ, ಹೇಗೆ ಬಂದ್ರು ಎಂಬುದು ಅತಿದೊಡ್ಡ ಪ್ರಶ್ನೆ ಎಂದರು.
ಕೃತ್ಯಕ್ಕೆ ಸ್ಥಳೀಯರ ಸಹಕಾರ ಇದ್ದುಕೊಂಡೇ ಆಗಿರಲಿ ಅಥವಾ ಸ್ಥಳೀಯರ ಸಹಕಾರ ಇಲ್ಲದೆಯೂ ಆಗಿರಲಿ. ನಮ್ಮ ಫೋರ್ಸ್ ಒಳಗಡೆ ಯಾರಾದರೂ ಸಹಕಾರ ಮಾಡಿದವರು ಇದ್ದರು ಸಹ ಅದನ್ನೆಲ್ಲ ಪತ್ತೆಹಚ್ಚಿ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇದು ನಮ್ಮ ದೇಶದ ಪ್ರಶ್ನೆ. ಹೆಚ್ಚಿನ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು.ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡಿರುವ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ತಿಳಿಸಿದರು.