ಚಿತ್ರದುರ್ಗ : ನಿಧಿ ಪಡೆಯುವ ಆಸೆಯಿಂದಾಗಿ ಅಮಾಯಕ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ. ಈ ಒಂದು ಕೊಲೆಗೆ ಸಂಬಂಧಿಸಿದಂತೆ ಜ್ಯೋತಿಷಿ ಸೇರಿದಂತೆ ಇಬ್ಬರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಪ್ರಭಾಕರ್ (52) ಎಂದು ಗುರುತಿಸಲಾಗಿದೆ.ಪ್ರಭಾಕರ್ ಪರಶುರಾಂಪುರದ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುತ್ತಿದ್ದರು. ಕೊಲೆಗೈದ ಆರೋಪಿಯನ್ನು ಆನಂದ್ ರೆಡ್ಡಿ ಎಂದು ತಿಳಿದುಬಂದಿದೆ. ಈತ ಕುಂದುರ್ಪಿಯಲ್ಲಿ ಬಾರ್ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆನಂದ ರೆಡ್ಡಿಗೆ ಪಾವಗಡದ ಜ್ಯೋತಿಷಿ ರಾಮಕೃಷ್ಣ, ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ಚಿನ್ನ ಸಿಗಲಿದೆ ಎಂದು ಹೇಳಿದ್ದ.
ಹಾಗಾಗಿ ಅಮಾಯಕ ಪ್ರಭಾಕರ್‌ಗೆ ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಆರೋಪಿಯ ಬೈಕ್ ಡೀಟೈಲ್ ಪ್ರಕಾರ ಆತನನ್ನು ಪತ್ತೆ ಮಾಡಲಾಗಿದೆ. ಮಚ್ಚು ಹಾಗೂ ಬಟ್ಟೆಯನ್ನು ಪೊಲಿಸರು ಸೀಜ್ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.