ಮಂಡ್ಯ: ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತಾಲೂಕಿನ ಹೊನಗಳ್ಳಿಮಠ ಗ್ರಾಮದಲ್ಲಿ ಆಟವಾಡುವ ವೇಳೆ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಮಗು ನಾಲೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ಸಂಭವಿಸಿದೆ.
ಹೌದು ಹೊನಗಹಳ್ಳಿಮಠ ನಿವಾಸಿ ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ ಸಬಿನ್‌ರಾಜ್ ಎನ್ನುವ 3 ವರ್ಷದ ಮಗು ಆಟವಾಡುತ್ತ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಕೊಚ್ಚಿ ಹೋಗಿದೆ. ನಾಲೆ ನೀರಿನಲ್ಲಿ ಮಗುವಿಗಾಗಿ ಪೋಲಿಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ನಾಲೆಯಲ್ಲಿ 700 ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹರಿಯುತ್ತಿದ್ದು, ಮಗುವಿನ ಹುಡುಕಾಟಕ್ಕೆ ತೊಂದರೆಯಾಗಿದೆ.
ಹೀಗಾಗಿ ನಾಲೆಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದ್ದು , ಸಂಪರ್ಕ ನಾಲೆಗಳ ಗೇಟನ್ನು ತೆರೆದು ನಾಲೆ ನೀರನ್ನು ಖಾಲಿ ಮಾಡುವ ಪ್ರಯತ್ನ ಸಾಗಿದೆ. ಮುಂಗಾರು ಕೃಷಿ ಚಟುವಟಿಕೆಗಳು ಹಾಗೂ ಕೆರೆಕಟ್ಟೆಗಳನ್ನು ತುಂಬಿಸುವ ಸಲುವಾಗಿ ಕೆ ಆರ್ ಎಸ್ ಜಲಾಶಯದಿಂದ ಬುಧವಾರವಷ್ಟೇ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಈ ನೀರು ಹೊನಗಳ್ಳಿಮಠ ಗ್ರಾಮವನ್ನು ಗುರುವಾರ ಮಧ್ಯಾಹ್ನ ತಲುಪಿತ್ತು. ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವಿನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯು ರಾತ್ರಿ 8.30ರವರೆಗೆ ಶೋಧ ಮುಂದುವರಿಸಿದ್ದರು. ಮಗು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.