ಕಲಬುರ್ಗಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಐವರು ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ತಲೆ ಸುತ್ತು, ಸುಸ್ತು ಸೇರಿ ಇತರೆ ಲಕ್ಷಣಗಳು ಕಂಡು ಬಂದು ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಕೂಡ 17 ಮಕ್ಕಳಲ್ಲಿ ಅದೇ ತರಹದ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.
ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಈ ದಿನ ಮಕ್ಕಳಿಗೆ ಬಿಸಿಯೂಟ ಬಡಿಸದೆ ಬಿಸ್ಕೆಟ್, ಒಆರ್‌ಎಸ್ ನೀಡಿದರು.ಕಾಳಗಿ ಆಸ್ಪತ್ರೆಯಲ್ಲೇ ಎಲ್ಲ ಅಧಿಕಾರಿಗಳು ಇದ್ದು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.
ಶಾಲೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಮೋಟಾರ್ ಸುಟ್ಟಿದ್ದು ಕೆಲದಿನಗಳಿಂದ ನೀರು ಪೂರೈಕೆ ಸ್ಥಗಿತಗವಾಗಿದೆ. ಯಾವ ಕಾರಣಕ್ಕೆ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂಬುದೇ ತಿಳಿಯದಾಗಿದೆ. ಮಲಘಾಣ ಗ್ರಾಮಸ್ಥರು ಕುಡಿಯುವ ನೀರು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.