ರಾಮನಗರ : ರಾಮನಗರದಲ್ಲಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಬೈಕ್ ಗೆ ವೇಗವಾಗಿ ಬಂದು ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಆ ಬಾಲಕನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಎಸ್ ಪಾಳ್ಯದ ಮಯ್ಯಾಸ್ ಫ್ಯಾಕ್ಟರಿ ಬಳಿ ನಡೆದಿದೆ.
ಮೃತ ಬಾಲಕನನ್ನು ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಸಿದ್ದಯ್ಯನದೊಡ್ಡಿ ಗ್ರಾಮದ ನಿವಾಸಿ ಚಿರಂತ್ ಗೌಡ (12) ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಚಿರಂತ್ ತಂದೆ ಸುರೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ ಸುರೇಶ್ ಅವರು ಮಗನನ್ನು ಅಜ್ಜಿ ಮನೆಗೆ ಬಿಡಲು ಬೈಕ್‌ನಲ್ಲಿ ಹೋಗ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಾಲಕ ಚಿರಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುರೇಶ್‌ಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸುರೇಶ್ ದಯಾನಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.