ಬೆಂಗಳೂರು : ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಬಾಲಕ ಸಾವನ್ನಪ್ಪಿದ್ದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಡಿಮದ್ದುಗಳ ಬಳಕ ನಿಷೇಧ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಟಾಕಿ, ಸಿಡಿಮದ್ದುಗಳನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿ ಬಸವರಾಜ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧಿಸಲಾಗಿದ್ದು, ಪಟಾಕಿ ಹೊಡೆದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ಪಟಾಕಿ ಸ್ಪೋಟಗೊಂಡು ಬಾಲಕ ಮೃತಪಟ್ಟ ಹಿನ್ನೆಲೆ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಪಟಾಕಿ ಬಾಕ್ಸ್ ಸ್ಪೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಐವರು ಗಾಯಗೊಂಡ ಘಟನೆ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದೆ. ಮುತ್ತೂರು ನಿವಾಸಿ ತನುಷ್ ರಾವ್(15) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಫ್ರೆಂಡ್ಸ್ ಯುವಕರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲಿಫ್ಟಿಂಗ್ ವಾಹನದಲ್ಲಿ ಪಟಾಕಿ ಬಾಕ್ಸ್ ಗಳನ್ನು ಇಡಲಾಗಿತ್ತು.
ಲಿಫ್ಟಿಂಗ್ ವಾಹನದ ಸೈಲೆನ್ಸರ್ ಬಿಸಿಯಿಂದಾಗಿ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದೆ. ಗಣೇಶ್(16), ಯೋಗೇಶ್(15), ಮುನಿರಾಜು(27), ನಾಗರಾಜು(35) ಚೇತನ್ ಶಾವಿ(13) ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಸಿಡಿಸಲು ತರಲಾಗಿದ್ದ ಪಟಾಕಿ ಬಾಕ್ಸ್ ಸ್ಪೋಟಗೊಂಡು ಅವಘಡ ಸಂಭವಿಸಿದ್ದು, ಇದೀಗ ಜಿಲ್ಲೆಯಲ್ಲಿ ಪಟಾಕಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.