ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಏಳು ಆಸ್ಪತ್ರೆಗಳು ಮತ್ತು ತಿಹಾರ್ ಜೈಲಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಭಯದ ವಾತಾವರಣ ಸೃಷ್ಟಿಸುವ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ.
ಕಳೆದ ಎರಡು ವಾರಗಳಿಂದ ದೇಶಾದ್ಯಂತ ವಿವಿಧ ನಗರಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕುತ್ತಿರುವ ಅಪರಿಚಿತರು ಮಂಗಳವಾರವೂ ತಿಹಾರ್ ಜೈಲು ಹಾಗೂ ದೆಹಲಿಯ ಜಿಟಿವಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ, ಹೆಡ್ಡೆವಾರ್ ಆಸ್ಪತ್ರೆ, ದೀಪ್ ಚಂದ್ ಬಂಧು ಆಸ್ಪತ್ರೆ, ಕೇಶವಪುರಂನ ಅತ್ತರ್ ಸೈನ್ ಜೈನ್ ಮತ್ತು ಗೀತಾ ಕಾಲನಿಯಲ್ಲಿರುವ ಚಾಚಾ ನೆಹರು ಆಸ್ಪತ್ರೆಗಳಿಗೆ ಇ-ಮೇಲ್ ಕಳುಹಿಸಿ ಭಯ ಸೃಷ್ಟಿಸಿದ್ದಾರೆ.
ದೇಶಾದ್ಯಂತ ಶಾಲೆಗಳು, ವಿಮಾನ ಮತ್ತು ರೈಲು ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗುತ್ತಿದ್ದು, ವಿದೇಶಿ ಮೇಲಿಂಗ್ ಸೇವಾ ಕಂಪನಿಗಳ ಮೂಲಕ ಇ-ಮೇಲ್ ಬರುತ್ತಿವೆ. ಭಾನುವಾರ ಯುರೋಪ್ ಮೂಲದ ‘beeble.com’ ಕಂಪನಿಯಿಂದ “courtisgod123@beeble.com” 2 – 2 ಹುಸಿ ಸಂದೇಶ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲ ಆಸ್ಪತ್ರೆಗಳಿಗೂ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ದಳ ಮತ್ತು ಬಾಂಬ್ ಪತ್ತೆ ದಳ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಈ ಹಿಂದಿನಂತೆಯೇ ಇವು ಸಹ ಹುಸಿ ಬೆದರಿಕೆ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.