ದೆಹಲಿ : ಇತ್ತೀಚಿಗೆ ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಕೆಲವು ದಿನಗಳ ನಂತರ, ಮತ್ತೊಂದು ಸಂದೇಶ ಬಂದಿದ್ದು, ದೆಹಲಿಯ ಎರಡು ಪ್ರಸಿದ್ಧ ಆಸ್ಪತ್ರೆಗಳಿಗೆ ಇಂದು ಮಧ್ಯಾಹ್ನ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಹೌದು ದೆಹಲಿಯ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.ಮಾಹಿತಿ ಮೇರೆಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಹಲವು ತಂಡಗಳು ಸ್ಥಳಕ್ಕೆ ಧಾವಿಸಿವೆ. ಏತನ್ಮಧ್ಯೆ, ಡಿಸಿಪಿ (ಉತ್ತರ) ಮನೋಜ್ ಮೀನಾ ಅವರು ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಹೇಳಿದರು.
ಬಾಂಬ್ ಬೆದರಿಕೆಯ ಕುರಿತು ಬುರಾರಿ ಆಸ್ಪತ್ರೆಯಲ್ಲಿ ಇಮೇಲ್ ಸ್ವೀಕರಿಸಲಾಗಿದೆ. ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ತಂಡಗಳು (ಬಿಡಿಟಿ) ಆಸ್ಪತ್ರೆಯಲ್ಲಿದ್ದಾರೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೊದಲ ಕರೆಯನ್ನು ಅಗ್ನಿಶಾಮಕ ಅಧಿಕಾರಿಗಳು ಮಧ್ಯಾಹ್ನ 3.15 ಗಂಟೆಗೆ ಬುರಾರಿ ಆಸ್ಪತ್ರೆಯಿಂದ ಮತ್ತು ಎರಡನೇ ಕರೆಯನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಿಂದ ಸಂಜೆ 4.26 ರ ಸುಮಾರಿಗೆ ಸ್ವೀಕರಿಸಿದ್ದಾರೆ. ಸದ್ಯ ಎರಡೂ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.