ಬೆಂಗಳೂರು: ಅಪರಿಚಿತ ಕಿಡಿಗೇಡಿಗಳು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಚೇರಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಕಳುಹಿಸಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಿನ್ನೆ ಈ ಒಂದು ಘಟನೆ ನಡೆದಿದ್ದು, ಈ ಬೆದರಿಕೆ ಸಂದೇಶ ಬಂದ ಕೂಡಲೇ ಡಿಸಿಎಂ ಕಚೇರಿಗೂ ಮಾಹಿತಿ ರವಾನಿಸಲಾಗಿದ್ದು, ಮನೆ ಮತ್ತು ಕಚೇರಿ ಮತ್ತು ವಿಮಾನ ನಿಲ್ದಾಣದ ಪ್ರತಿ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪರಿಚಿತ ಇ-ಮೇಲ್‌ನಿಂದ ಟರ್ಮಿನಲ್ ಮ್ಯಾನೇಜರ್ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳು, ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ನಲ್ಲಿ 4 ಸುಧಾರಿತ ಸ್ಫೋಟಕಗಳನ್ನು (ಐಇಡಿ) ಇಡಲಾಗಿದ್ದು, 11 ಗಂಟೆ ಸುಮಾರಿಗೆ ಸ್ಫೋಟಗೊಳ್ಳಲಿವೆ. ಇದಾದ 2 ಗಂಟೆ ಬಳಿಕ ಡಿಸಿಎಂ ಶಿವಕುಮಾರ್ ಅವರ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುತ್ತೇನೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.