ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಹಲವು ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶಗಳು ಬರುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಹೋಟೆಲ್ಗೆ ಅಪರಿಚಿತರು ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಬೆಂಗಳೂರಿನ ಐಬಿಎಸ್ ಹೋಟೆಲಿಗೆ ಅಪರಿಚಿತರಿಂದ ಈ ಒಂದು ಸಂದೇಶ ಬಂದಿದೆ.
ಬೆಂಗಳೂರಿನ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಐಬಿಎಸ್ ಹೋಟೆಲ್ ಗೆ ಬಾಂಬ್ ಬೆದರಿಕೆ ಈಮೇಲ್ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಬಂದ ಕೂಡಲೇ ಹೋಟೆಲ್ ನಲ್ಲಿದ್ದ ಎಲ್ಲರನ್ನು ಕೂಡಲೇ ಹೊರಗಡೆ ಕಳುಹಿಸಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಯಾವುದೇ ಹೋಟೆಲ್ ಹೆಸರು ಅಥವಾ ಸ್ಥಳ ಉಲ್ಲೇಖಿಸದೆ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ಯಾವುದೇ ಕ್ಷಣದಲ್ಲಿ ಸ್ಪೋಟ ಆಗಬಹುದು ಎಂದು ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಸಂಜೆ 7 ಗಂಟೆ ಸುಮಾರಿಗೆ ಅಪರಿಚಿತರು ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಸಂದೇಶ ಬಂದ ತಕ್ಷಣ ಸಂಪಂಗಿರಾಮನಗರ ಠಾಣೆಗೆ ಹೋಟೆಲ್ ನವರು ಮಾಹಿತಿ ನೀಡಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಐಬಿಎಸ್ ಹೋಟೆಲ್ ನಲ್ಲಿ ಇದೀಗ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರ ತಪಾಸಣೆಯ ವೇಳೆ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸ್ ಅಧಿಕಾರಿಗಳು ಇದೆ ವೇಳೆ ಘೋಷಿಸಿದ್ದಾರೆ.