ಬೆಂಗಳೂರು : ಉಗ್ರರಿಗೆ ಸಹಕಾರ ನೀಡುತ್ತಿದ್ದ ಮೂವರು ಶಂಕಿತ ಉಗ್ರರನ್ನು ನಿನ್ನೆ ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದು, 6 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಸಿಸಿಬಿ ಮೂವರು ಉಗ್ರರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಇದೀಗ ವಿಚಾರಣೆಯ ವೇಳೆ ಸ್ಪೋಟಕ ಅಂಶ ಬಯಲಾಗಿದ್ದು ಬೆಂಗಳೂರಲ್ಲಿ ಬಾಂಬೆ ಸ್ಪೋಟಿಸಿ ಉಗ್ರ ನಾಸಿರ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳಿಸುವ ಪ್ಲಾನ್ ಶಂಕಿತ ಉಗ್ರರು ಮಾಡಿದ್ದರು ಎಂದು ತಿಳಿದು ಬಂದಿದೆ.
ಹೌದು. 2008ರ ಬೆಂಗಳೂರು ಸ್ಫೋಟದಲ್ಲಿ ಜೈಲುಪಾಲಾಗಿರುವ ಲಷ್ಕರ್ ಸಂಘಟನೆಯ ಉಗ್ರ ನಾಸೀರ್ ಮುಸ್ಲಿಂ ಯುವಕರ ತಂಡ ಬಳಸಿ ಹೊರ ಬರಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.ಬಾಂಬ್ ಸ್ಫೋಟಿಸಿ ಸಿನಿಮಾ ಸ್ಟೈಲ್‌ನಲ್ಲಿ ಪರಪ್ಪನ ಅಗ್ರಹಾರದಿಂದ ಪರಾರಿಯಾಗಲು ಟಿ ನಾಸೀರ್‌ಮುಂದಾಗಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಚು ರೂಪಿಸಲು ಎಎಸ್‌ಐ ಚಾಂದ್ ಪಾಷಾ ನೆರವು ನೀಡುವುದಾಗಿ ಹೇಳಿದ್ದ. ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾಂದ್ ಪಾಷಾ ನಾಸೀರ್‌ನನ್ನು ಬೆಂಗಳೂರು, ಕೇರಳ ಹಾಗೂ ಇತರೇ ರಾಜ್ಯಗಳ ಕೋರ್ಟ್‌ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸೀರ್‌ಗೂ ನೀಡುತ್ತಿದ್ದ. ಇದಕ್ಕಾಗಿ ಚಾಂದ್ ಪಾಷಾಗೆ ನಾಸೀರ್ ಕಡೆಯಿಂದ ಹಣ ಸಂದಾಯವಾಗುತ್ತಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಹೊರ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ನಾಸೀರ್ ಜೈಲಿನಲ್ಲೇ ಪ್ಲ್ಯಾನ್ ಮಾಡಿದ್ದ. ಪ್ರಕರಣ ಸಂಬಂಧ ನಾಸೀರ್‌ನನ್ನು ಜೈಲಿನಿಂದ ಹಲವು ಬಾರಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವಾಗ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಸ್ಫೋಟಗೊಂಡಾಗ ಪೊಲೀಸರ ಗಮನ ಬೇರೆಡೆ ಹೋಗುತ್ತದೆ. ಈ ವೇಳೆ ಪರಾರಿಯಾಗಬಹುದು ಎಂಬ ಲೆಕ್ಕಾಚಾರವನ್ನು ನಾಸೀರ್ ಹಾಕಿಕೊಂಡಿದ್ದ.
ನಾಸೀರ್ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದರಿಂದ ಚಾನ್ ಪಾಷಾಗೆ ವಾಹನದ ರೂಟ್ ಮ್ಯಾಪ್ ಎಲ್ಲವೂ ಚೆನ್ನಾಗಿ ಗೊತ್ತಿತ್ತು. ನಾಸೀರ್ ಜೀಪ್ ಹತ್ತಿಸಿ ವಾಹನ ಬರುತ್ತಿದ್ದಂತೆ ಬಾಂಬ್ ಸ್ಫೋಟಿಸಬೇಕು. ಪ್ರತಿ ಮಾಹಿತಿ ನಾನು ನೀಡುತ್ತೇನೆ ಎಂದು ಜುನೈದ್ ಅಹಮದ್ ಟೀಂಗೆ ಚಾನ್ ಪಾಷಾ ಹೇಳಿದ್ದ. ಈ ಪ್ಲ್ಯಾನ್‌ನಂತೆ ಜುನೈದ್ ತಂಡ ಬಾಂಬ್ ಸ್ಫೋಟಿಸಲು ಸಂಚು ಮಾಡುತ್ತಿತ್ತು. ಆದರೆ 2023 ರಲ್ಲಿ ಖಚಿತ ಮಾಹಿತಿ ಮೇರೆಗೆ ಜುನೈದ್ ತಂಡದ ಚಟುವಟಿಕೆ ತಿಳಿದು ಈ ಯೋಜನೆಯನ್ನು ಸಿಸಿಬಿ ಪೊಲೀಸರು ವಿಫಲಗೊಳಿಸಿದ್ದರು.