ಹಾಸನ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಅದೆಷ್ಟೋ ಜಿಲ್ಲೆಗಳಲ್ಲಿ ಜನರು ಊರು ತೊರೆದಿದ್ದಾರೆ. ಅಲ್ಲದೆ ಇದುವರೆಗೂ ರಾಜ್ಯದಲ್ಲಿ ಹಲವು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆM ಈ ವಿಚಾರವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಮಾತನಾಡಿ ಮುಂದಿನ ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ಮಂಡನೆ ಆಗಲಿದೆ ಎಂದು ತಿಳಿಸಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಕಿರುಕುಳ ನೀಡುತ್ತಿರುವ ವಿಚಾರವಾಗಿ ಮೈಕ್ರೋ ಫೈನಾನ್ಸ್ ಹಾವಳಿಗೆ ನಾವು ಬ್ರೇಕ್ ಹಾಕುತ್ತೇವೆ. ಮೀಟರ್ ಬಡ್ಡಿ ದಂಧೆ, ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕುತ್ತೇವೆ. ನಿನ್ನೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಸಿಬ್ಬಂದಿಗಳ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಕುರಿತು ಚರ್ಚಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ ಎಂದು ಕೆ ಎನ್ ರಾಜಣ್ಣ ತಿಳಿಸಿದರು.
ಇನ್ನು ಜಾತಿಗಣತಿ ವರದಿ ಜಾರಿ ಮಾಡುವ ಕುರಿತು ಮಾತನಾಡಿದ ಅವರು, ಈ ವರದಿ ಕೊಟ್ಟ ದಿನವೇ ಖಜಾನೆಯಲ್ಲಿ ಇರಿಸಲಾಗಿದೆ. ಗೌಪ್ಯತೆ ಕಾಪಾಡುವ ಸಲುವಾಗಿ ಖಜಾನೆಯಲ್ಲಿ ಇಟ್ಟಿದ್ದೇವೆ. ಕಳೆದ ವಾರ ಸಂಪುಟ ಮುಂದೆ ಇಡಲು ಚರ್ಚೆಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಿಎಂ ದೆಹಲಿಗೆ ಹೋಗಿದ್ದರು. ಯಾರು ವರದಿಯಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.ಲ್ ಎಂದರು.
ಸಾರ್ವಜನಿಕವಾಗಿ ಬಂದ ಬಳಿಕ ಚರ್ಚೆ ಮಾಡಬಹುದು. ಜಾತಿ ಗಣತಿ ವರದಿ ಮಂಡಿಸಿದ ಕೂಡಲೇ ಜಾರಿ ಆಯಿತು ಎಂದು ಭಾವಿಸಬೇಕಿಲ್ಲ. ಇದು ಕೇವಲ ಮಾಹಿತಿ ಕೊಡುವ ವರದಿ ಹಾಗಾಗಿ ಜಾತಿ ಗಣತಿ ವರದಿ ಕುರಿತು ಯಾರು ಹೆದರ ಬೇಕಿಲ್ಲ. ಈ ವರದಿ ಸಂಗ್ರಹ ಮಾಡಿ 10 ವರ್ಷ ಆಗಿದೆ. ಹಿಂದಿನ ವರದಿ ಪ್ರಸ್ತುತ ಕೂಡ ಇರಬಹುದು. ಇದೇನು ಕುರಾನ್, ಭಗವದ್ಗೀತೆ, ಬೈಬಲ್ ಅಲ್ಲ. ಇಂತಹ ವರದಿಗಳು ಕಾಲಕಾಲಕ್ಕೆ ಬದಲಾಗಿದೆ ಎಂದು ತಿಳಿಸಿದರು.