ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸದ್ಯ SIT ವಶದಲ್ಲಿ ಇರುವ ಆರ್‌ಆರ್ ನಗರ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ದೂರಿನಲ್ಲಿ ಉಲ್ಲೇಖಿತ ಎಚ್‌ಐವಿ ಸೋಂಕಿತೆ ಎನ್ನಲಾದ ಮಹಿಳೆಯನ್ನು ಪತ್ತೆ ಹಚ್ಚಿರುವ ಎಸ್‌ಐಟಿ, ಈಗ ಆಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಹೌದು ಶಾಸಕ ಮುನಿರತ್ನ ತಮ್ಮ ರಾಜಕೀಯ ವಿರೋಧಿಗಳನ್ನು ಎಚ್‌ಐವಿ ಸೋಂಕಿತೆಯನ್ನು ಬಳಸಿಕೊಂಡು ಏಡ್ಸ್ ಟ್ರ್ಯಾಪ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಲಾಗಿತ್ತು. ಇನ್ನು ಅತ್ಯಾಚಾರ ಕುರಿತ ದೂರಿನಲ್ಲಿ ಓರ್ವ ಎಚ್‌ಐವಿ ಸೋಂಕಿತೆ ಎಂದೂ ಮಹಿಳೆ ಹೆಸರು ಸಹ ಉಲ್ಲೇಖವಾಗಿತ್ತು.
ಆದರೆ ಪ್ರಕರಣ ದಾಖಲಾದ ಬಳಿಕ ಭೂಗತವಾಗಿದ್ದ ಎಚ್ ಐವಿ ಸೋಂಕಿತೆ ಎನ್ನಲಾದ ಮಹಿಳೆಯನ್ನು ಪತ್ತೆ ಹಚ್ಚಿದ ಎಸ್‌ಐಟಿ, ಆಕೆ ಎಚ್‌ಐವಿ ಸೋಂಕಿತಳೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ನಡೆಸಿ ವರದಿ ಪಡೆಯಲು ಯೋಚಿಸಿದೆ. ಈ ಬಗ್ಗೆ 2-3 ದಿನಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಈ ವೈದ್ಯಕೀಯ ವರದಿಯೂ ಮುನಿರತ್ನ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಒಂದು ವೇಳೆ ಆಕೆಯ ವರದಿ ಪಾಸಿಟಿವ್ ಬಂದರೆ ಮುನಿರತ್ನ ವಿರುದ್ದ ಏಡ್ಸ್ ಟ್ರ್ಯಾಪ್ ಆರೋಪಕ್ಕೆ ಪ್ರಬಲ ವೈದ್ಯಕೀಯ ಪುರಾವೆ ಸಿಕ್ಕಂತಾಗುತ್ತದೆ. ಇದರಿಂದ ಶಾಸಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.