ಬಾಗಲಕೋಟೆ : ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿತ್ತು. ಇದೀಗ ಈ ಒಂದು ಸ್ಫೋಟದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗಾಯಗೊಂಡ ಮಹಿಳೆಯ ಪ್ರಿಯಕರ ತನ್ನ ಪ್ರೀತಿಗೆ ಅಡ್ಡಿಯಾಗಿದ್ದಾಳೆಂದು ಆಕೆಯ ಸ್ನೇಹಿತೆಯ ಕೊಲೆಗೆ ಹಾಕಿದ್ದ ಎನ್ನಲಾಗಿದೆ.
ಹೌದು ಹೇರ್ ಡ್ರೈಯರ್ ಸ್ಪೋಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡ ಬಂದವಳ ಕೊಲೆಗೆ ಆರೋಪಿ ಸಿದ್ದಪ್ಪ ಎನ್ನುವವ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಆದರೆ ಆರೋಪಿಯು ತಾನು ಮಾಡಿದ್ದ ಪ್ಲಾನಿಗೆ ತನ್ನ ಪ್ರಿಯತಮೆನೆ ಬಲಿಯಾಗಿದ್ದಾಳೆ. ನವೆಂಬರ್ 20ರಂದು ಈ ಒಂದು ಹೇರ್ ಡ್ರೈಯರ್ ಸ್ಪೋಟ ಪ್ರಕರಣ ನಡೆದಿತ್ತು. ಇಳಕಲ್ ಠಾಣೆ ಪೋಲಿಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಆರೋಪಿ ಸಿದ್ದಪ್ಪ ಶೀಲವಂತರನಿಂದ ಶಶಿಕಲಾ ಎನ್ನುವ ಮಹಿಳೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಆರೋಪಿ ಸಿದ್ದಪ್ಪನ ಪ್ರೀತಿಗೆ ಶಶಿಕಲಾ ಹಡಪದ ಅಡ್ಡ ಬಂದಿದ್ದಳು. ಮೃತ ಯೋಧನ ಪತ್ನಿ ಬಸವರಾಜೇಶ್ವರಿಳನ್ನು ಸಿದ್ದಪ್ಪ ಪ್ರೀತಿಸುತ್ತಿದ್ದ. ಈ ವೇಳೆ ಸಿದ್ದಪ್ಪನ ಸಹವಾಸ ಬಿಡು ಎಂದು ಶಶಿಕಲಾ ಬಸವರಾಜೇಶ್ವರಿಗೆ ಆಗಾಗ ಬುದ್ಧಿವಾದ ಹೇಳುತ್ತಿದ್ದಳು.
ಇದೇ ಕಾರಣಕ್ಕೆ ಶಶಿಕಲಾ ಹಡಪದ ಕೊಲೆಗೆ ಸಿದ್ದಪ್ಪ ಸಂಚು ರೂಪಿಸಿದ್ದ ಎನ್ನಲಾಗಿದೆ. ಸಿದ್ದಪ್ಪ ಹೇರ್ ಡ್ರೈಯರ್ ನಲ್ಲಿ ಡಿಟೋನೇಟರ್ ಸ್ಫೋಟಕವನ್ನು ಅಳವಡಿಸಿದ್ದ. ಬಾಗಲಕೋಟೆಯಿಂದ ಶಶಿಕಲಾ ಹೆಸರು ಹಾಕಿ ಕೊರಿಯರ್ ಕಳುಹಿಸಿದ್ದ. ಈ ವೇಳೆ ಬಸವರಾಜೇಶ್ವರಿ ಈ ಒಂದು ಕೊರಿಯರನ್ನು ಪಡೆದು ಓಪನ್ ಮಾಡಿ ಸ್ವಿಚ್ ಹಾಕಿದ ಕೂಡಲೇ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ.
ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ಆಕೆಯ ಕೈಗಳ ಬೆರಳುಗಳು ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬಳಿಕ ಮಾಧ್ಯಮದವರು ಆಕೆಯನ್ನು ಮಾತನಾಡಿಸಿದಾಗ ಶಶಿಕಲಾನೇ ಈ ಒಂದು ಹೇರ್ ಡ್ರೈಯರ್ ಆರ್ಡರ್ ಮಾಡಿದ್ದಳು. ತಾನು ಊರಿಗೆ ಬಂದಿದ್ದೇನೆ ನೀನು ತೆಗೆದುಕೋ ಎಂದು ತಿಳಿಸಿದ್ದಳು ಎಂದು ಬಸವರಾಜೇಶ್ವರಿ ಕೂಡ ಸುಳ್ಳು ಹೇಳಿದ್ದಾಳೆ.
ಆದರೆ ಶಶಿಕಲಾ ನಾನು ಯಾವುದೇ ಹೇರ್ ಡ್ರೈಯರ್ ಆನ್ಲೈನ್ ನಲ್ಲಿ ಆರ್ಡರ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಳಕಲ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಾಗ ಶಶಿಕಲಾ ಹಡಪದ ಅವರ ಕೊಲೆಗೆ ಸಿದ್ದಪ್ಪ ಎನ್ನುವ ವ್ಯಕ್ತಿ ಹಾಕಿದ್ದ ಎನ್ನುವುದು ಬಯಲಾಗಿದೆ. ಇದೀಗ ಇಳಕಲ್ ಠಾಣೆ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.