ಬೆಂಗಳೂರು : ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಗಳ್ಳತನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮತಗಳ್ಳತನ ಯತ್ನ ಕೃತ್ಯದಲ್ಲಿ ಪಶ್ಚಿಮ ಬಂಗಾಳದ ಕುಗ್ರಾ ಮದಲ್ಲಿ ಕೂತು 10 ರುಪಾಯಿಗೆ ಒಂದು ಒಟಿಪಿ ಮಾರುತ್ತಿದ್ದ ಕಿಡಿಗೇಡಿಯೊಬ್ಬ ನನ್ನು ಎಸ್‌ಐಟಿ ಬಂಧಿಸಿ ಕರೆತಂದಿದೆ.
ಹೌದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಕುರಿತು ಗಂಭೀರವಾಗಿ ಆರೋಪ ಮಾಡಿದ್ದರು. ಅಲ್ಲದೇ ಆಳಂದ್ ಕ್ಷೇತ್ರದಲ್ಲಿ ಸಹ ಮತಗಳ್ಳತನ ಆಗಿರುವ ಕುರಿತು ಆರೋಪಿಸಿದ್ದರು. ಇದೀಗ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬಾಪಿ ಆದ್ಯ ಬಂಧಿತ ಆರೋಪಿ. ಈತನಿಂದ ಎರಡು ಲ್ಯಾಪ್‌ಟಾಪ್ ಹಾಗೂ ಕೆಲ ತಾಂತ್ರಿಕ ವಸ್ತುಗಳನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಪ್ರಕರಣ ಸಂಬಂಧ ಕಲಬುರಗಿ ನಗರದಲ್ಲಿ ಕೆಲವರನ್ನು ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆ ನಡೆಸಿತು.
ಆಗ ಬಂಗಾಳದ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸುಳಿವು ಆಧರಿಸಿ ಬೆನ್ನತ್ತಿದ್ದ ಎಸ್‌ಐಟಿ, ಕೊನೆಗೆ ಹಳ್ಳಿಯಲ್ಲೇ ಕೂತು ಒಟಿಪಿ ಮಾರುತ್ತಿದ್ದ ಆದ್ಯನನ್ನು ಸೆರೆ ಹಿಡಿದಿದೆ. ಬಳಿಕ ಆತನನ್ನು ನಗರಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು, ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 12 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಬಳಿಕ ಸಿಐಡಿಯ ಕಚೇರಿಗೆ ಕರೆತಂದು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.








