ಬೆಂಗಳೂರು : ಈಗಾಗಲೇ KSRTC ಬಸ್, ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆ ಮಾಡಿ ಸರ್ಕಾರ ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ಇದರ ಬೆನ್ನಲ್ಲೆ ಇದೀಗ ಮತ್ತೊಂದು ಶಾಕ್ ನೀಡಲು ಹೊರಟಿರುವ ಸರ್ಕಾರ ವಿವಿಧ ದರ ಏರಿಕೆಗಳಿಂದ ತತ್ತರಿಸಿರುವ ಸಾರ್ವಜನಿಕರಿಗೆ ಇದೀಗ ವಿದ್ಯುತ್ ಮೀಟರ್ ದರ ಶೇ.400 ರಿಂದ ಶೇ.800 ರಷ್ಟು ಏರಿಕೆ ಮಾಡಿ ಹೊಸ ಶಾಕ್ ನೀಡಿದೆ.
ಹೌದು ಬೆಸ್ಕಾಂ ಸಂಸ್ಥೆ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.ಜ.15 ರಿಂದ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇನ್ನು ಹೊಸ ಕಾಯಂ ಸಂಪರ್ಕ ಪಡೆಯಲೂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು, ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಎಂಬ ಆಯ್ಕೆ ನೀಡಿದೆ.
ಸ್ಮಾರ್ಟ್ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರು. ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್‌ಗೆ ಯಾವುದೇ ಮಿತಿ ಇರುವುದಿಲ್ಲ. ಇದಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲ ದಿನವೇ ಕಡಿತ ಮಾಡಲಾಗುತ್ತದೆ. ಬ್ಯಾಲೆನ್ಸ್ ಶೂನ್ಯವಾದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ.
ಇತ್ತೀಚೆಗೆ ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಸಭೆ ನಡೆಸಿದ್ದು ಬೆಸ್ಕಾಂನಲ್ಲಿ ಜಾರಿಗೆ 3 ದರವನ್ನೇ ರಾಜ್ಯದ ಇತರೆ ಎಸ್ಕಾಂಗಳ ವ್ಯಾಪ್ತಿಯಲ್ಲೂ ಜಾರಿ ಮಾಡಬೇಕು. ಏಕರೂಪ ದರ ನೀತಿ ಅನ್ವಯವಾಗಬೇಕು ಎಂದು ನಿರ್ಧಾರ ಮಾಡಲಾಗಿದೆ. ಅದರಂತೆ ಸದ್ಯದಲ್ಲೇ ಇತರೆ ಎಸ್ಕಾಂಗಳಲ್ಲೂ ಸದ್ಯದಲ್ಲೇ ಸ್ಮಾರ್ಟ್ ಮೀಟರ್ ಕಡ್ಡಾಯವಾಗಲಿದ್ದು, ಈ ಬಗ್ಗೆ ಎಸ್ಕಾಂಗಳು ಕೆಇಆರ್‌ಸಿಗೂ ಪ್ರಮಾಣಪತ್ರ ಸಲ್ಲಿಕೆ ಮಾಡಿವೆ.