ಬೆಂಗಳೂರು : ಬೆಂಗಳೂರಿನ ಜನತೆಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು ಜನವರಿ 2ನೇ ವಾರದಲ್ಲಿ ನೀರಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಈ ಕುರಿತು ಶಾಸಕರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ನಿರ್ಧರಿಸಲಾಗುತ್ತೆ ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದರು.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಡಿಸಿಎಂ ಸಭೆ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದೇವೆ.ಎಷ್ಟು ಪರ್ಸೆಂಟೇಜ್ ಏರಿಕೆ ಆಗುತ್ತೆ ಅನ್ನೋದು ನಿರ್ಧಾರ ಆಗುತ್ತೆ. ಉಪಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೂ ಜಲಮಂಡಳಿ ನಷ್ಟದ ಬಗ್ಗೆ ಪತ್ರದಲ್ಲಿ ವಿವರಿಸಿದ್ದೇವೆ ಎಂದು ತಿಳಿಸಿದರು.
ಜಲಮಂಡಳಿ 1000 ಲೀಟರ್ ನೀರು ಪೂರೈಕೆ ಮಾಡುವುದಕ್ಕೆ 52 ರೂಪಾಯಿ ಖರ್ಚು ಮಾಡ್ತಿದೆ. ಆದರೆ, 25 ರಿಂದ 40 ರೂ. ಮಾರುತ್ತಾ ಇದ್ದೇವೆ. ಇದರಿಂದ ಜಲಮಂಡಳಿಗೆ ನಷ್ಟ ಆಗ್ತಿದೆ. ಪ್ರತಿ ತಿಂಗಳಿಗೆ ಜಲಮಂಡಳಿಗೆ 41 ಕೋಟಿ ರೂಪಾಯಿ ನಷ್ಟ ಆಗ್ತಿದೆ.ಕಾವೇರಿ ಐದನೇ ಹಂತ ಆದ ಮೇಲೆ 82 ಕೋಟಿ ನಷ್ಟ ಆಗುತ್ತೆ. ವಾರ್ಷಿಕವಾಗಿ ಸಾವಿರಾರು ಕೋಟಿ ನಷ್ಟ ಆಗ್ತಿದೆ. ಹಾಗಾಗಿ ದರ ಏರಿಕೆ ಮಾಡಬೇಕಿದೆ. ಜಲಮಂಡಳಿಗೆ ಆರ್ಥಿಕ ಹೊರೆಯಾಗ್ತಿದೆ. ಶಾಸಕರ ಸಭೆ ಬಳಿಕ ನೀರಿನ ದರ ಏರಿಕೆ ಆಗುತ್ತೆ ಎಂದರು.