ಬೆಂಗಳೂರು : ಬೆಂಗಳೂರು ಗ್ರಾಮಾಂತರದಲ್ಲಿ ಹಾಸನ, ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 75 ಮತ್ತು 48ರ ಟೋಲ್ ದರಗಳು ಏರಿಕೆಯಾಗಿವೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ 5 ರಿಂದ 10 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರಿಗೆ ದಂಡದ ಮೊತ್ತವೂ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ರಾಜ್ಯದ ವಿವಿಧ ಟೋಲ್‌ಗಳು ಏಪ್ರಿಲ್‌ನಲ್ಲಿ ದರ ಏರಿಕೆ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿದ್ದರು, ಈಗ ಬೆಂಗಳೂರಿನಿಂದ ಹಾಸನ, ಮಂಗಳೂರು, ಧರ್ಮಸ್ಥಳ, ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹೋಗುವ ವಾಹನ ಸವಾರರಿಗೆ ಸೆಪ್ಟೆಂಬರ್ 1 ರಿಂದ ಟೋಲ್ ಶುಲ್ಕದ ಹೆಚ್ಚಳ ಸಂಕಷ್ಟದ ಮೇಲೆ ಬರೆ ಎಳೆದಂತಾಗಿದೆ.
ಫಾಸ್ಟ್‌ಟ್ಯಾಗ್ ಹೊಂದಿರುವ ಲಘುವಾಹನಗಳ ಏಕಮುಖ ಪ್ರಮಾಣ 55ರಿಂದ 60ಕ್ಕೆ ಏರಿಕೆಯಾದರೆ, ವಾಣಿಜ್ಯ ಮತ್ತು ಸರಕು ವಾಹನಗಳ ಏಕಮುಖ ಸಂಚಾರಕ್ಕೆ 200ರಿಂದ 205 ಏರಿಕೆ ಆಗಿದೆ,ಇದೇ ಟೋಲ್‌ಗಳಲ್ಲಿ ದ್ವಿಮುಖ ಸಂಚಾರಕ್ಕೆ ಹಿಂದಿನದರದ ಮೇಲೆ 10ರೂ ಸಹ ಏರಿಕೆಯಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಏಕಮುಖ ಪ್ರಯಾಣಕ್ಕೆ ದಂಡದ ರೂಪದಲ್ಲಿ 110ರೂ ಪಾವತಿ ಮಾಡಬೇಕಾಗಿತ್ತು,ಈಗ 120ರೂಗೆ ದಂಡದ ಪ್ರಮಾಣವೂ ಸಹ ಏರಿಕೆಯಾಗಿದೆ. ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದಿದ್ದರು ದುಪ್ಪಟ್ಟು ದಂಡ ಪಾವತಿ ಮಾಡಬೇಕಾಗಿದೆ.