ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಕಳೆದ ಹಲವು ತಿಂಗಳುಗಳಿಂದ ಸವಾರರಲ್ಲಿ ಗೊಂದಲ ಹಾಗೂ ಆತಂಕ ಮೂಡಿಸಿದ್ದ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಯ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಏಳು ಬಾರಿ ಗಡುವು ನೀಡಿದರೂ ಬಾರದ ಸ್ಪಂದನೆ
ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಈ ಹಿಂದೆ ಏಳು ಬಾರಿ ಗಡುವನ್ನು ವಿಸ್ತರಿಸಿತ್ತು. ಕಳೆದ ಮೇ ತಿಂಗಳಿನಲ್ಲಿ ಏಳನೇ ಬಾರಿಗೆ ಅಂತಿಮ ದಿನಾಂಕವನ್ನು ಮುಂದೂಡಲಾಗಿತ್ತು. ಇಷ್ಟೆಲ್ಲಾ ಅವಕಾಶ ನೀಡಿದರೂ ರಾಜ್ಯದ ವಾಹನ ಸವಾರರು ಮಾತ್ರ ನಿರಾಸಕ್ತಿ ತೋರಿದ್ದಾರೆ. ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಕೇವಲ ಶೇ. 29 ರಷ್ಟು ವಾಹನ ಮಾಲೀಕರು ಮಾತ್ರ ಈ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಈಗ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿರುವ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಸರ್ಕಾರದ ಆದೇಶಕ್ಕೆ ಗೌರವ ನೀಡಿ, ಆನ್‌ಲೈನ್‌ನಲ್ಲಿ ಬುಕ್ ಮಾಡಿ ಅಥವಾ ಆರ್‌ಟಿಓ ಕಚೇರಿಗಳಲ್ಲಿ ಸಾಲಿನಲ್ಲಿ ನಿಂತು ಸಾವಿರಾರು ರೂಪಾಯಿ ಪಾವತಿಸಿದವರಿಗೆ ಈಗ ವಂಚನೆಯಾದಂತಾಗಿದೆ.
ಮುಂದೇನು?: ಸರ್ಕಾರ ಆದೇಶ ವಾಪಸ್ ಪಡೆದಿರುವುದರಿಂದ ಇನ್ನು ಮುಂದೆ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ ಇರುವುದಿಲ್ಲ. ಆದರೆ ಈಗಾಗಲೇ ಹಣ ಪಾವತಿಸಿ ಪ್ಲೇಟ್ ಪಡೆದವರಿಗೆ ಯಾವುದೇ ರೀಫಂಡ್ ಅಥವಾ ಪರಿಹಾರದ ಬಗ್ಗೆ ಸರ್ಕಾರ ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ.








