ಬೆಂಗಳೂರು : ಶಿವಮೊಗ್ಗದಲ್ಲಿ ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಪಾಲ್ಗೊಳ್ಳಲು ನಗರಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ 7 ದಿನಗಳ ನಿರ್ಬಂಧ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ತೆರವುಗೊಳಿಸುವಂತೆ ಕ್ರಮದ ಮುತಾಲಿಕ್ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ನಗರಕ್ಕೆ ತೆರಳಲು ಅನುಮತಿ ನೀಡಿದೆ.
ಘಟನೆ ಹಿನ್ನೆಲೆ?
ಶಿವಮೊಗ್ಗದಲ್ಲಿ ಮಾರ್ಚ್ 1ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವರನ್ನು ಶಿವಮೊಗ್ಗ ಹೊರವಲಯದ ರಾಗಿಗುಡ್ಡದ ಬಳಿ ತಡೆದು ವಾಪಸ್ ಕಳುಹಿಸಲಾಗಿತ್ತು. ಫೆಬ್ರವರಿ 28 ರಿಂದ 7 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲೆ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಶ್ರೀರಾಮ ಸೇನೆ ವತಿಯಿಂದ ಪ್ರಕಟಿಸಲಾದ ಲವ್ ಜಿಹಾದ್ ಪುಸ್ತಕ ಬಿಡುಗಡೆಗಾಗಿ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಇದಕ್ಕೂ ಮುನ್ನ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ನಂತರ ಭದ್ರಾವತಿಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ, ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ -ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಕಾರ್ ತಡೆದ ಪೊಲೀಸರು ಆದೇಶ ಪ್ರತಿ ತೋರಿಸಿ ಶಿವಮೊಗ್ಗ ಪ್ರವೇಶಿಸದಂತೆ ಹೇಳಿದ್ದರು.