ಬೆಂಗಳೂರು : ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಅವರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಂಗಳೂರಿನ 91ನೇ CCH ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಈ ಒಂದು ಪ್ರಕರಣದಲ್ಲಿ ವಿ ಸೋಮಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
2013 ರಲ್ಲಿ ಮೂಡಲಪಾಳ್ಯದ ರಾಮಕೃಷ್ಣ ಎನ್ನುವವರು ವಿ.ಸೋಮಣ್ಣ ಮತ್ತು ಕುಟುಂಬದವರು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಸಾಕಷ್ಟು ಅಕ್ರಮ ಸ್ಥಿರಾಸ್ತಿ ಹೊಂದಿದ್ದಾರೆ.ಲ್ ಎಂದು ಖಾಸಗಿ ದೂರು ಸಲ್ಲಿಸಿದ್ದರು.ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಸಂತೋಷ್ ಗಜಾನನ ಭಟ್ ಅವರಿದ್ದ ಏಕಸದಸ್ಯ ಪೀಠ, ರಾಮಕೃಷ್ಣ ಅವರ ಆರೋಪಕ್ಕೆ ಪೂರಕ ಸಾಕ್ಷಿ ಇಲ್ಲವೆಂದು ಪಿಸಿಆರ್ ಅನ್ನು ವಜಾಗೊಳಿಸಿದೆ.
ಪ್ರಕರಣ ಹಿನ್ನೆಲೆ?
2013 ರಲ್ಲಿ ಮೂಡಲಪಾಳ್ಯದ ರಾಮಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಸೋಮಣ್ಣ ಮತ್ತು ಕುಟುಂಬದವರು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಸಾಕಷ್ಟು ಅಕ್ರಮ ಸ್ಥಿರಾಸ್ತಿ ಹೊಂದಿದ್ದಾರೆ. ಮಾರ್ಗದರ್ಶಿ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ಎಸಿಬಿ ತನಿಖೆಯಲ್ಲಿ ಕೇವಲ ಅವರ ವೈಯಕ್ತಿಕ ಮತ್ತು ಖಾಸಗಿ ಸಾಲಗಳ ಬಗ್ಗೆ ತನಿಖೆ ನಡೆಸಲಾಗಿದೆ. ಸೋಮಣ್ಣ ಸಾರ್ವಜನಿಕ ಸೇವಕರಾಗಿ ಅಕ್ರಮ ಸಂಪಾದನೆ ಮಾಡುವ ಮೂಲಕ ಕ್ರಿಮಿನಲ್ ದುರ್ನಡತೆ ತೋರಿದ್ದಾರೆ. ಆದ್ದರಿಂದ, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ-1988ರ ಕಲಂ 13(1)(ಬಿ) (ಡಿ) ಮತ್ತು (ಇ) ಕಲಂ 13(2)ರ ಅಡಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು ಎಂದು ಕೋರಿದ್ದರು.