ಬೀದರ್ : ಬೀದರ್ ನಲ್ಲಿ ಭೀಕರವಾದ ಕೊಲೆ ನಡೆದಿದ್ದು, ತಂಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಯುವತಿಯ ಸಹೋದರರು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ಜರುಗಿದೆ.
ಕೊಲೆಯಾದ ಯುವಕನನ್ನು ಪ್ರಶಾಂತ್ ಬಿರಾದರ್ (25) ಎಂದು ತಿಳಿದುಬಂದಿದೆ.ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ ಕೊಲೆ ಆರೋಪಿಗಳು ಎನ್ನಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವಕ ಹಾಗೂ ಆರೋಪಿಗಳ ಸಹೋದರಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ ನಿರಗೂಡಿ ಗ್ರಾಮದಲ್ಲಿ ಪ್ರಶಾಂತ್ ಹಾಗೂ ಯುವತಿ ಸಹೋದರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಪ್ರಶಾಂತ್ ತಲೆ ಮೇಲೆ ಯುವತಿಯ ಸಹೋದರರು ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.