ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಆಡುಗೋಡಿ ಎಂಬಲ್ಲಿ ನಡೆದಿದೆ. ಆಡುಗೋಡಿಯ ಬಸವಣ್ಣ ಟೆಂಪಲ್ ಲೇಔಟ್ ನಿವಾಸಿ ತನಿಷಾ ಚೌಧರಿ(28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಆದರೆ ತನಿಷಾ ಪಾಲಕರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆಕೆಯ ಪಾಲಕರು, ಅಳಿಯ ತರುಣ್ ಚೌಧರಿ ಮತ್ತು ಆತನ ಪಾಲಕರ ವಿರುದ್ಧ ವರದಕ್ಷಿಣೆ ಹಾಗೂ ಕಿರುಕುಳ ಆರೋಪದಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನ ಮೂಲಕ ತರುಣ್ ಚೌಧರಿ ಆಡುಗೋಡಿಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದು, 2022 ರಲ್ಲಿ ರಾಜಸ್ಥಾನದ ಮೂಲದ ತನಿಷಾರನ್ನು ಮದುವೆಯಾಗಿದ್ದ. ಆರಂಭದಲ್ಲಿ ಅನ್ನೋನ್ಯವಾಗಿದ್ದ ದಂಪತಿಗಳ ನಡುವೆ ಇತ್ತೀಚೆಗೆ ಕೌಟುಂಬಿಕ ವಿಚಾರ ಹಾಗೂ ಮಕ್ಕಳಾಗದ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ತರುಣ್ ಚೌಧರಿ ಹಾಗೂ ಆತನ ಕುಟುಂಬ ಸದಸ್ಯರು ಆಕೆಗೆ ಹಿಂಸೆ ನೀಡುತ್ತಿದ್ದರು ಎಂದು ಹೇಳಲಾಗಿದೆ. ಅದರಿಂದ ಬೇಸತ್ತ ತನಿಷಾ, ಆ.4 ರಂದು ರಾತ್ರಿ ೮.೩೦ರ ಸುಮಾರಿಗೆ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಕೋಣೆಯ ಬಾಗಿಲು ತೆರೆದಾಗ ತನಿಷಾ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಆಗ ತನಿಷಾ ಪಾಲರಿಗೆ ಕರೆ ಮಾಡಿದ್ದ ತರುಣ್, ನಿಮ್ಮ ಮಗಳು ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ. ಬೇಗ ಬನ್ನಿ ಎಂದಿದ್ದ.
ಹೈದ್ರಾಬಾದ್ನಲ್ಲಿ ನೆಲೆಸಿರುವ ತನಿಷಾ ಕುಟುಂಬದವರು ಗಾಬರಿಯಲ್ಲಿ ಬೆಂಗಳೂರಿಗೆ ಬಂದಾಗ ಪುತ್ರಿ ತನಿಷಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿತ್ತು ಎಂಬ ವಿಚಾರ ಗೊತ್ತಾಗಿದೆ. ಸದ್ಯ ತರುಣ್ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.